ರಿಕ್ಷಾ ಚಾಲಕರಿಬ್ಬರ ಮೇಲೆ ಹಲ್ಲೆ ಪ್ರಕರಣ: ಮಾನಭಂಗಕ್ಕೆ ಯತ್ನ ಆರೋಪದಲ್ಲಿ ಪ್ರತಿ ದೂರು
ಪುತ್ತೂರು, ಜೂ.11: ರಿಕ್ಷಾ ಚಾಲಕರಿಬ್ಬರಿಗೆ ತಂಡವೊಂದು ತಲವಾರಿನಿಂದ ಕಡಿದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ನಡೆದಿದೆ. ಇದೇ ಘಟನೆಗೆ ಸಂಬಂಧಿಸಿ ಮಹಿಳೆಯರಿಬ್ಬರ ಮಾನಭಂಗ ಯತ್ನ ಪ್ರಕರಣವೂ ದಾಖಲಾಗಿದೆ.
ಸವಣೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ಸವಣೂರು ಗ್ರಾಮದ ಕುಕ್ಕುಜೆ ನಿವಾಸಿ ಉಮ್ಮರ್ ಅವರ ಪುತ್ರ ಮುಹಮ್ಮದ್ ಆಸೀಫ್ (22) ಮತ್ತು ಸವಣೂರು ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಖಲಂದರ್(24) ಹಲ್ಲೆಗೊಳಗಾದವರು. ಗಾಯಾಳು ರಿಕ್ಷಾ ಚಾಲಕ ಮುಹಮ್ಮದ್ ಆಸೀಫ್ ಅವರನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಲಂದರ್ ಅವರು ಪುತ್ತೂರಿನ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸವಣೂರಿನ ಇಡ್ಯಾಡಿ ನಿವಾಸಿಗಳಾದ ಮೋನಪ್ಪ ಗೌಡ, ದರ್ಣಪ್ಪ ಗೌಡ, ಪೂವಣಿ ಗೌಡ, ಅವರ ಪುತ್ರರಾದ ಪ್ರಸಾದ್,ಬಾಲಕೃಷ್ಣ ಮತ್ತು ಕೇಶವ, ಕುಶಾಲಪ್ಪ ಹಾಗೂ ಬಾಬು ಗೌಡ ಎಂಬವರು ಸೇರಿಕೊಂಡು ತಮ್ಮನ್ನು ರಿಕ್ಷಾದಿಂದ ಎಳೆದು ಹಾಕಿ ತಲವಾರಿನಿಂದ ಕಡಿದು, ಕಬ್ಬಿಣದ ರೋಡ್‌ನಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಖಲಂದರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇಡ್ಯಾಡಿ ನಿವಾಸಿ ಮೋನಪ್ಪಗೌಡ ತನ್ನ ರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿ ಅವರ ಮನೆಯ ಕಡೆಗೆ ಕರೆದೊಯ್ದಿದ್ದರು. ಅದರಂತೆ ಅಲ್ಲಿಗೆ ಹೋದಾಗ ಮನೆಯ ಸಮೀಪದ ಕಾಲುದಾರಿಯ ಬಳಿಯಲ್ಲಿ ರಿಕ್ಷಾ ನಿಲ್ಲಿಸಲು ತಿಳಿಸಿ, ಮೋನಪ್ಪ ಗೌಡರು ಬಾಡಿಗೆ ಹಣ ತಂದು ಕೊಡುತ್ತೇನೆ ಎಂದು ಅವರ ಮನೆಗೆ ತೆರಳಿದ್ದರು. ನಾನು ರಿಕ್ಷಾದಲ್ಲಿಯೇ ಕುಳಿತು ಬಾಡಿಗೆ ಪಡೆದುಕೊಳ್ಳಲು ಅವರನ್ನು ಕಾಯುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಪೂವಣಿ ಗೌಡರು ತನ್ನಲ್ಲಿ ಇಲ್ಲಿ ಏನು ಕೆಲಸ ಎಂದು ಪ್ರಶ್ನಿಸಿ ನನ್ನ ಮೇಲೆ ಹಲ್ಲೆ ನಡೆಸಿದರು.
ಇದೇ ವೇಳೆ ಪೂವಣಿ ಗೌಡರೊಂದಿಗೆ ಅವರ ಪುತ್ರ ಪ್ರಸಾದ್ ಎಂಬವರು ಸೇರಿಕೊಂಡು ಹಲ್ಲೆ ನಡೆಸಿದರು. ತಾನು ಅವರಿಂದ ತಪ್ಪಿಸಿಕೊಂಡು ಉಪವಾಸ ಬಿಡುವ ವೇಳೆಗೆ ಸವಣೂರು ಮಸೀದಿಗೆ ಬಂದಿದ್ದೆ. ಬಳಿಕ ರಾತ್ರಿ ವೇಳೆ ಮನೆಗೆ ಇಡ್ಯಾಡಿ ದಾರಿಯಾಗಿಯೇ ಹೋಗಬೇಕಾಗಿರುವ ಕಾರಣ ತನ್ನ ಸ್ನೇಹಿತ ರಿಕ್ಷಾ ಚಾಲಕನಾಗಿರುವ ಖಲಂದರ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೆ. ಇಡ್ಯಾಡಿ ತಲುಪುತ್ತಿದ್ದಂತೆಯೇ ರಿಕ್ಷಾವನ್ನು ತಡೆದು ನಿಲ್ಲಿಸಿದ ಶಿವಣ್ಣ ಗೌಡ ಇಡ್ಯಾಡಿ, ಧರ್ಣಪ್ಪ ಗೌಡ ಇಡ್ಯಾಡಿ ಮತ್ತಿತರರನ್ನೊಳಗೊಂಡ ತಂಡ ತನ್ನ ರಿಕ್ಷಾವನ್ನು ದೂಡಿಹಾಕಿ ತನ್ನ ತಲೆ ಮತ್ತು ಅಂಗೈ ಭಾಗಕ್ಕೆ ಕತ್ತಿಯಿಂದ ಕಡಿದಿರುವುದಾಗಿ ಆಸೀಫ್ ಆರೋಪಿಸಿದ್ದಾರೆ. ಆರೋಪಿಗಳು ಖಲಂದರ್ ಮೇಲೆಯೂ ತಲುವಾರಿನಿಂದ ಕಡಿದು ಹಲ್ಲೆ ನಡೆಸಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಖಲಂದರ್ ಅವರು ನೀಡಿರುವ ದೂರಿನಂತೆ ಕಡಬ ಪೊಲೀಸರು ಪೂವಣಿ ಗೌಡ ಮತ್ತು ಮೋನಪ್ಪ ಗೌಡ ಎಂಬವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಇಬ್ಬರು ಮಹಿಳೆಯರ ಮಾನಭಂಗ ಯತ್ನ: ಪ್ರತಿದೂರು
ಇದೇ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾಗಿರುವ ರಿಕ್ಷಾ ಚಾಲಕರಿಬ್ಬರ ಮೇಲೆ ಮಹಿಳೆಯರಿಬ್ಬರ ಮಾನಭಂಗಕ್ಕೆ ಯತ್ನಿಸಿದ ದೂರು ದಾಖಲಾಗಿದೆ. ಪೂವಣಿ ಗೌಡ ಅವರ ಪತ್ನಿ ಮಾನಭಂಗ ಯತ್ನ ನಡೆಸಿರುವ ಬಗ್ಗೆ ದೂರು ನೀಡಿದ್ದಾರೆ. ಮೋನಪ್ಪ ಗೌಡರು ರಿಕ್ಷಾ ಬಾಡಿಗೆಗೆ ಗೊತ್ತುಪಡಿಸಿಕೊಂಡು ಮನೆಗೆ ಬಂದಿದ್ದು, ಈ ರಿಕ್ಷಾ ಬಾಡಿಗೆ ವಿಚಾರದಲ್ಲಿ ಅವರಿಬ್ಬರೊಳಗೆ ತಕರಾರು ನಡೆದಿತ್ತು. ಆ ವೇಳೆ ತನ್ನ ಪೂವಣಿ ಗೌಡ ಅವರು ಅವರನ್ನು ಸಮಾಧಾನ ಪಡಿಸಿ ವಿವಾದವನ್ನು ಇತ್ಯರ್ಥಗೊಳಿಸಿ ಹಿಂದಕ್ಕೆ ಕಳುಹಿಸಿದ್ದರು.
ಆ ಬಳಿಕ ರಿಕ್ಷಾ ಚಾಲಕ ಮುಹಮ್ಮದ್ ಆಸೀಫ್ ಎಂಬಾತ ತನ್ನ ಗೆಳೆಯನೊಂದಿಗೆ ಬಂದು ನಮ್ಮ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಾಡಿಗೆ ವಿಚಾರದಲ್ಲಿ ನೀವು ಮೋನಪ್ಪ ಗೌಡ ಅವರಿಗೆ ಬೆಂಬಲ ನೀಡಿದ್ದೀರಿ ಎಂದು ವಾದಿಸಿ ತನ್ನ ಪತಿ ಪೂವಣಿ ಗೌಡ ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆ ವೇಳೆ ಹಲ್ಲೆ ತಡೆಯಲು ಬಂದ ತನ್ನ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾರೆ. ಜಗಳ ಬಿಡಿಸಲು ಬಂದ ತನ್ನ ಸಂಬಂಧಿಕ ಮಹಿಳೆಯ ಮೈಮೇಲೆಯೂ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಡಬ ಪೊಲೀಸರು ಇತ್ತಂಡಗಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.