ಸವಣೂರು: ಎಸ್ಪಿನೇತೃತ್ವದಲ್ಲಿ ಶಾಂತಿಸಭೆ

Update: 2016-06-11 15:17 GMT

ಪುತ್ತೂರು, ಜೂ. 11: ಸವಣೂರಿನಲ್ಲಿ ಶುಕ್ರವಾರ ರಾತ್ರಿ ನಡೆದ ವೈಯುಕ್ತಿಕ ವಿಚಾರದ ಗಲಭೆಯಿಂದ ಸಾರ್ವಜನಿಕರಿಗೆ ಇರುವ ಗೊಂದಲ ನಿವಾರಣೆ ಕುರಿತಾಗಿ ಸವಣೂರು ಯುವಕ ಮಂಡಲದ ಯುವಸಭಾ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೋರಸೆ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಅಭಿಪ್ರಾಯ ತಿಳಿಸಿದ ಸವಣೂರು ಕೆ.ಸೀತಾರಾಮ ರೈ, ಸವಣೂರು ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಕೆಲವು ಸಣ್ಣಪುಟ್ಟ ಗಲಭೆಗಳಿಗೆ ಕೋಮುಬಣ್ಣ ಹಚ್ಚುವ ಮೂಲಕ ಅಶಾಂತಿಗೆ ಕಾರಣವಾಗುತ್ತಿದೆ. ಇಲ್ಲಿ ಯಾವುದೇ ಕೋಮು ವೈಷಮ್ಯ ಇಲ್ಲ. ಕೆಲವು ಕಿಡಿಗೇಡಿಗಳಿಂದ ಊರಿನ ಹೆಸರು ಹಾಳಾಗುತ್ತಿದೆ ಎಂದರು.

ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ, ಸವಣೂರಿನಲ್ಲಿ ಈ ಹಿಂದೆ ನಡೆದ ಅಡಿಕೆ ಕಳ್ಳತನ, ಜಾನುವಾರು ಕಳ್ಳತನ ಮೊದಲಾದ ಘಟನೆಗಳು ನಡೆದರೂ ಕಳ್ಳರ ಪತ್ತೆಯಾಗಿಲ್ಲ. ಸವಣೂರಿನಲ್ಲಿ ಪೊಲೀಸ್ ಹೊರಠಾಣೆಯ ಅಗತ್ಯ ಇದೆ. ಈಗಿನ ಮಾಹಿತಿಯಂತೆ ಸವಣೂರನ್ನು ಬೆಳ್ಳಾರೆ ಠಾಣೆಗೆ ಸೇರಿಸುವ ಮಾಹಿತಿ ಇದೆ. ಆದರೆ ಬೆಳ್ಳಾರೆಗಿಂತ ಪುತ್ತೂರು ಠಾಣೆಗೆ ಸೇರಿಸುವುದರಿಂದ ಇಲ್ಲಿನವರಿಗೆ ಉಪಕಾರವಾಗಲಿದೆ ಎಂದರು.

ವರ್ತಕ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ತಾ.ಪಂ.ಮಾಜಿ ಸದಸ್ಯ ಅಬ್ದುರ್ರಹ್ಮಾನ್, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಗ್ರಾ.ಪಂ.ಮಾಜಿ ಸದಸ್ಯ ಸುದರ್ಶನ್ ಕಂಪ, ಗ್ರಾ.ಪಂ.ಸದಸ್ಯ ಎಂ.ಎ.ರಫೀಕ್, ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯಗುರು ಗಿರಿಶಂಕರ್ ಸುಲಾಯ ಮತ್ತಿತರರು ಮಾತನಾಡಿ ಸವಣೂರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.

ಎಲ್ಲಾ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ. ಕಿಡಿಗೇಡಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು. ಜಿಲ್ಲೆಯಲ್ಲಿ 20 ದಿನದಲ್ಲಿ ಇಂತಹ 5ನೆ ಘಟನೆ ಇದಾಗಿದೆ. ಅಧಿಕಾರಿಗಳು ವರ್ಗಾವಣೆಯಾಗುತ್ತಾರೆ. ಆದರೆ ಊರಿನ ಜನತೆ ಇಲ್ಲೇ ಇರುತ್ತಾರೆ. ಅದಕ್ಕಾಗಿ ಜನತೆ ಶಾಂತಿ ಸುವ್ಯವಸ್ಥೆ ಕಾಪಾಡಾಲು ಇಲಾಖೆಯೊಂದಿಗೆ ಕೈಜೋಡಿಸಬೇಕು. ಸಾರ್ವಜನಿಕರು ಮನೆ ಬಿಟ್ಟು ದೂರ ಹೋಗುವುದಿದ್ದರೆ ಪೊಲೀಸ್ ಇಲಾಖೆಗೆ ಮುಂಚಿತವಾಗಿ ತಿಳಿಸಿದರೆ ಮನೆಗೆ ಭದ್ರತೆ ನೀಡಲಾಗುವುದು. ಇಲಾಖೆಯ ಮೇಲೆ ನಂಬಿಕೆ ಹಾಗೂ ಸಹಕಾರ ಬೇಕು ಎಂದು ಎಸ್ಪಿ ಭೂಷಣ್ ಜಿ.ಬೊರಸೆ ಹೇಳಿದರು.

ಸಭೆಯಲ್ಲಿ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ,ಎನ್.ಸುಂದರ ರೈ ಸವಣೂರು, ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ,ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯರಾದ ಸತೀಶ್ ಅಂಗಡಿಮೂಲೆ, ಅಬ್ದುರ್ರಝಾಕ್, ಸತೀಶ್ ಬಲ್ಯಾಯ, ಯುವಕ ಮಂಡಲದ ಅಧ್ಯಕ್ಷ ಸಚಿನ್, ಕಾರ್ಯದರ್ಶಿ ಸುಬ್ರಹಣ್ಯ ಬಿ.ಎಸ್, ಶಾಫಿ, ಕರೀಂ, ಮುಹಮ್ಮದ್, ಸವಣೂರು ಹಿಂ.ಜಾ.ವೇ.ಅಧ್ಯಕ್ಷ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಹಿಂದು ಯುವಸೇನೆಯ ಪ್ರಜ್ವಲ್ ರೈ ಪಾತಾಜೆ, ಚಾಪಲ್ಲ ಜುಮ್ಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಕಣಿಮಜಲು, ಕಾರ್ಯದರ್ಶಿ ಅಬೂಬಕರ್,ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಕಾರ್ಯದರ್ಶಿ ಸಿ.ಎ.ನಝೀರ್, ಎಂ.ಎಸ್.ರಫೀಕ್, ಸಿದ್ದೀಕ್ ಅಲೆಕ್ಕಾಡಿ, ಮುಹಮ್ಮದ್ ಬಿ.ಎಂ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು.

ಪುತ್ತೂರು ಉಪವಿಭಾಗದ ಎಎಸ್ಪಿ ಸಿ.ಬಿ.ರಿಷ್ಯಂತ್, ಕಡಬ ಠಾಣಾ ಎಸೈ ಉಮೇಶ್ ಉಪ್ಪಳಿಕೆ, ಸಂಪ್ಯ ಗ್ರಾಮಾಂತರ ಠಾಣಾ ಎಎಸೈ ಚೆಲುವಯ್ಯ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News