ಪರಿಸರ ಸಮತೋಲನಕ್ಕೆ ಇರುವೆ, ಸೊಳ್ಳೆಗಳೂ ಮುಖ್ಯ: ಡಾ.ಮಧ್ಯಸ್ಥ
ಉಡುಪಿ, ಜೂ.11: ಜೀವ ವೈವಿಧ್ಯತೆಯಲ್ಲಿ ಎಲ್ಲಾ ವಿಧದ ಪ್ರಾಣಿ-ಪಕ್ಷಿ- ಸಸ್ಯಸಂಕುಲಗಳ ಮಧ್ಯದ ಸಂಬಂಧಗಳನ್ನು ಅರಿತು ಅವುಗಳನ್ನು ರಕ್ಷಿಸುವುದು ಮಾನವನ ಅಸ್ತಿತ್ವಕ್ಕೆ ತೀರ ಅಗತ್ಯ. ಜೀವ ಸಂಕುಲದ ಸಮತೋಲನಕ್ಕೆ ಇರುವೆ, ಸೊಳ್ಳೆಗಳೂ ಕೂಡ ಅವಶ್ಯವಾಗಿವೆ ಎಂದು ಪರಿಸರ ತಜ್ಞ ಡಾ.ಎನ್. ಎ.ಮಧ್ಯಸ್ಥ ಹೇಳಿದ್ದಾರೆ.
ಔಷಧೀಯ ಗುಣಗಳಿರುವ ದ್ರವ್ಯಗಳ ಮಾಹಿತಿಯನ್ನು, ವಿವಿಧ ರೋಗ ಹಾಗೂ ಚಿಕಿತ್ಸಾ ಸಿದ್ಧಾಂತಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಆಚಾರ್ಯ ವಾಗ್ಭಟರ ಗೌರವಾರ್ಥವಾಗಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ‘ವಾಗ್ಭಟ ಸಪ್ತಾಹ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಹಾಯಕ ಸ್ನಾತಕೋತ್ತರ ಡೀನ್ ಡಾ.ಬಿ.ಆರ್.ದೊಡ್ಡಮನಿ ಆಯು ರ್ವೇದದಲ್ಲಿ ಪರಿಸರದ ವರ್ಣನೆ ಹಾಗೂ ರೋಗ ತಡೆಗಟ್ಟುವಿಕೆಯ ಮಹತ್ವದ ಬಗ್ಗೆ ತಿಳಿಸಿದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಟಿ.ಶ್ರೀಧರ ಬಾಯರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದ್ರವ್ಯಗುಣ ವಿಭಾಗದ ವರ್ಷಾವಧಿ ಕಾರ್ಯಕ್ರಮಗಳ ವಿವರಣೆಯನ್ನು ಒಳಗೊಂಡ ಕಿರುಚಿತ್ರ ವೊಂದನ್ನು ಪ್ರದರ್ಶಿಸಲಾಯಿತು.
ಪ್ರಾಂಶುಪಾಲ ಡಾ.ಶ್ರೀಕಾಂತ್ ಸ್ವಾಗತಿಸಿದರು. ಡಾ.ಮುಹಮ್ಮದ್ ಪೈಸಲ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಡಾ.ರವಿಕೃಷ್ಣ ಎಸ್. ವಂದಿಸಿದರು. ಡಾ.ಕಾವ್ಯ ತ್ಯಾಗರಾಜನ್ ಮತ್ತು ಡಾ.ಸಂದು ಜಿ. ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು. ಡಾ.ಚೈತ್ರಾ ಹೆಬ್ಬಾರ್ ಕಾರ್ಯಕ್ರಮ ಸಂಯೋಜಿಸಿದರು.