×
Ad

ಗ್ರಾಮೀಣ ಮಕ್ಕಳಿಗೆ ವೌಲ್ಯಯುತ ಶಿಕ್ಷಣ ಅಗತ್ಯ: ಸುಬ್ರಮ್ಮಣ್ಯ ಭಟ್

Update: 2016-06-11 21:43 IST

ಪುತ್ತೂರು, ಜೂ.11: ಗ್ರಾಮೀಣ ಮಕ್ಕಳಿಗೆ ವೌಲ್ಯಯುತ ಶಿಕ್ಷಣದ ಅಗತ್ಯವಿದ್ದು, ಶಿಶುಮಂದಿರಗಳಲ್ಲಿ ಪಡೆಯುವ ಶಿಕ್ಷಣವನ್ನು ಬೇರೆ ಯಾವುದೇ ಶಿಕ್ಷಣ ಕೇಂದ್ರಗಳಲ್ಲಿ ಪಡೆಯಲು ಸಾಧ್ಯವಿಲ್ಲ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್. ಆರ್ . ರಂಗಮೂರ್ತಿ ಹೇಳಿದರು.

ಅವರು ಶನಿವಾರ ಒಳಮೊಗ್ರು ಗ್ರಾಮದ ಕೈಕಾರದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ನರೇಂದ್ರ ಶಿಶುಮಂದಿರದ ಕಟ್ಟಡದ ಲೋಕಾರ್ಪಣೆ ಮತ್ತು ಗ್ರಾಮ ವಿಕಾಸ ಚಟುವಟಿಕೆಗಳ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಶುಮಂದಿರದ ಶಿಕ್ಷಣ ಇಂದಿನ ಕಾಲದಲ್ಲಿ ಅನಿವಾರ್ಯತೆಯ ಶಿಕ್ಷಣವಾಗಿ ಮಾರ್ಪಟ್ಟಿದೆ. ಇಲ್ಲಿನ ಶಿಕ್ಷಣದಲ್ಲಿ ವಿಶೇಷತೆ ಇದೆ, ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಶಿಕ್ಷಣವನ್ನು ಶಿಶು ಮಂದಿರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ವೌಲ್ಯಗಳ ಶಿಕ್ಷಣ ದೊರೆಯಬೇಕಾದರೆ ಸಹೃದಯಿ ಜನತೆಯ ಸಹಕಾರ ಅತಿ ಅಗತ್ಯವಾಗಿದೆ ಎಂದು ಹೇಳಿದರು.

ಶಿಶು ಮಂದಿರವನ್ನು ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರ ರೈ ಹೊಸಮನೆ ಉದ್ಘಾಟಿಸಿದರು. ಉದ್ಯಮಿ ಸದಾನಂದ ರೈ ಆರ್ಗುಡಿ, ಗಂಗಾಧರ ಶೆಟ್ಟಿ ಪನಡ್ಕ, ಮಂಗಳೂರಿನ ಬೈಟ್‌ವೇ ಇಂಡಿಯಾ ಕನ್ಸಲ್ಟೆನ್ಸಿ ಆ್ಯಂಡ್ ಸರ್ವೀಸಸ್‌ನ ನಿರ್ದೇಶಕ ಮನಮೋಹನ ರೈ ಚೆಲ್ಯಡ್ಕ, ಒಳಮೊಗ್ರು ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ವಸಂತ ಗೌಡ ಉರ್ವ, ಸೀತಾರಾಮ ರೈ ಚೆಲ್ಯಡ್ಕ ಉಪಸ್ಥಿತರಿದ್ದರು.

ಹಿಂದಿನ ಎರಡು ವರ್ಷಗಳಲ್ಲಿ ಶಿಶುಮಂದಿರವನ್ನು ನಡೆಸಲು ತಮ್ಮ ನಿವಾಸದಲ್ಲಿ ಜಾಗ ನೀಡಿದ ಮುರಳೀಧರ ಕಲ್ಲೂರಾಯ ರಾಯರಮನೆ ಮತ್ತು ಪ್ರಸ್ತುತ ಶಿಶುಮಂದಿರ ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಗಂಗಾಧರ ಶೆಟ್ಟಿ ಪನಡ್ಕರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಚಟುವಟಿಕೆ ಪ್ರಾರಂಭಿಕವಾಗಿ ಜಲ ಮರುಪೂರಣ ಮಾಡಲು ಗ್ರಾಮದ 7 ಜನರಿಗೆ ಸಂಕೇತಿಕವಾಗಿ ವೀಳ್ಯ ನೀಡಲಾಯಿತು. ಗ್ರಾಮ ವಿಕಾಸ ಚಟುವಟಿಕೆಯ ಕುರಿತು ಗ್ರಾಮ ವಿಕಾಸ ಯೋಜನೆಯ ಸಂಯೋಜಕ ಸಂತೋಷ್ ಕುಮಾರ್ ರೈ ಮಾಹಿತಿ ನೀಡಿದರು.

ಶಿಶು ಮಂದಿರದ ನಿರ್ದೇಶಕ ಪ್ರಕಾಶ್ಚಂದ್ರ ರೈ ಕೈಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂತೋಷ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಮರನಾಥ ರೈ ಐಂಬಾಗಿಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News