ನ್ಯಾಯಾಲಯ ಆವರಣದಲ್ಲಿ ಕೊಲೆ ಯತ್ನ ಪ್ರಕರಣ: ಮತ್ತೋರ್ವನ ಸೆರೆ
ಮಂಗಳೂರು, ಜೂ. 11: ಹೋಂ ಸ್ಟೇ ಪ್ರಕರಣದ ಆರೋಪಿಗಳು ಕೋರ್ಟ್‌ಗೆ ಹಾಜರಾಗುವ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲೇ ಸಂಪತ್ ಎಂಬಾತನ ಕೊಲೆಗೆ ಯತ್ನಿಸಿದ ರಾಜು ಯಾನೆ ಜಪಾನ್ ಮಂಗನಿಗೆ ಸಹಕಾರ ನೀಡಿದ್ದಾನೆಂಬ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನ್ನು ನಿಶಾಂತ್ ಎಂದು ಗುರುತಿಸಲಾಗಿದೆ.
ಹೋಂ ಸ್ಟೇ ಪ್ರಕರಣದ ಆರೋಪಿ ಸುಭಾಶ್ ಪಡೀಲ್, ಸಂಪತ್ ಮತ್ತಿತರರು ಜೂನ್ 4ರಂದು ನಗರದ ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಪ್ರಕರಣದ ಆರೋಪಿ ರಾಜು ಯಾನೆ ಜಪಾನ್ ಮಂಗ ಈತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿ ಕೊಲೆಗೆ ಯತ್ನಿಸಿದ್ದ.
ಈ ಸಂದರ್ಭ ಪೊಲೀಸರು ಜಪಾನ್ ಮಂಗನನ್ನು ಬಂಧಿಸಿದ್ದರು. ಆದರೆ, ಈತನನ್ನು ತಪ್ಪಿಸಿಕೊಳ್ಳಲು ಕೋರ್ಟ್ ಆವರಣದ ಹೊರಗೆ ಕಾಯುತ್ತಿದ್ದ ನಿಶಾಂತ್ ಎಂಬಾತ ಅಂದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸುವ ಮೂಲಕ ಕೋರ್ಟ್ ಆವರಣದಲ್ಲಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದಂತಾಗಿದೆ.