×
Ad

ಪುತ್ತೂರು: ‘ಮಿಷನ್ 95+’ ಗೌರವ ಅಭಿನಂದನಾ ಕಾರ್ಯಕ್ರಮ

Update: 2016-06-11 22:59 IST

ಪುತ್ತೂರು, ಜೂ.11: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆಗೆ ಕಾರಣವಾಗಿದ್ದ ‘ಮಿಷನ್ 95+’ ಯೋಜನೆಯ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ಪುತ್ತೂರಿನ ಸಂತ ವಿಕ್ಟರನ್ ಬಾಲಿಕಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್, ಮಿಷನ್ 85+ ತಾಲೂಕಿನಲ್ಲಿ ಯಶಸ್ವಿಯಾಗುವುದರೊಂದಿಗೆ ರಾಜ್ಯಕ್ಕೂ ಮಾದರಿಯಾಗಿದೆ. ವಿದ್ಯಾರ್ಥಿಗಳ ಭಾವನಾತ್ಮಕ ಬುದ್ದಿಮತ್ತೆಯನ್ನು ಬೆಳೆಸುವ ಮೂಲಕ ಮಿಷನ್ 95+ ಯಶಸ್ವಿಗೆ ಕಾರಣವಾಗಿದೆ. ಈ ಬಾರಿ ತುಳು ಪರೀಕ್ಷೆಗೆ ಹಾಜರಾಗಿರುವ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ರಾಮಕುಂಜ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ಸತೀಶ್ ಭಟ್, ರಾತ್ರಿ ಶಾಲೆ ನಡೆಸಲು ಪೋಷಕರ ಬೆಂಬಲ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪೋಷಕರ ಬೆಂಬಲ ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ಅವಲೋಕನ ಅಗತ್ಯವಿದೆ. ಅಂಕಿ ಅಂಶ ಹೆಚ್ಚಳದ ಧಾವಂತದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ ಎಂದರು.

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಶಿಕ್ಷಕರು ಕಷ್ಟಪಟ್ಟು ಅವರನ್ನು ಮುಂದೆ ತಂದಲ್ಲಿ ಅಂತಹ ಮಕ್ಕಳು ಬದುಕಿನುದ್ದಕ್ಕೂ ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದರು.

ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಮಾತನಾಡಿ, ಮಿಷನ್ 95+ ಕಾರ್ಯಕ್ರಮವು ಇಲಾಖೆಯ ಅಧಿಕಾರಿಗಳು ನೀಡಿದ ಒತ್ತಡವಲ್ಲ. ಶಿಕ್ಷಕರು ಸ್ವಯಂ ಅಳವಡಿಸಿಕೊಂಡಿರುವ ವ್ಯವಸ್ಥೆಯಾಗಿದೆ. ಮಾಧ್ಯಮಗಳು ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳದೆ ಮಿಷನ್ 95+ ವಿಚಾರದಲ್ಲಿ ಋಣಾತ್ಮಕ ವರದಿಗಳನ್ನು ಮಾಡಿದೆ. ನಮ್ಮ ಶ್ರಮವನ್ನು ಪತ್ರಕರ್ತರು ಅರಿತುಕೊಂಡು ವರದಿ ಮಾಡಬೇಕಿತ್ತು. ಪತ್ರಿಕಾ ವರದಿ ನೋವು ತಂದಿದೆ ಎಂದರು.

ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ಓಸ್ವಾಲ್ಡ್ ರಾಡ್ರಿಗಸ್, ಉಪ್ಪಿನಂಗಡಿ ಪ್ರೌಢಶಾಲಾ ಮುಖ್ಯಗುರು ದಿವಾಕರ ಆಚಾರ್ಯ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನವೀನ್ ಸ್ಟೀಫನ್ ವೇಗಸ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರದೀಪ್, ಸಂತ ವಿಕ್ಟರನ ಪ್ರೌಢಶಾಲೆಯ ಪ್ರಭಾರ ಮುಖ್ಯಗುರು ರೋಸ್ಲಿನ್ ಲೋಬೊ, ಈಶ್ವರಮಂಗಲ ಪ್ರೌಢಶಾಲೆಯ ಮುಖ್ಯಗುರು ಸರ್ವೋತ್ತಮ ಬೋರ್ಕರ್, ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ನಝೀರ್, ಬೆಥನಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ಸಿ. ಎಮ್ರಿಟಾ ಮತ್ತಿತರರು ಅನಿಸಿಕೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಮಿಷನ್ 95+ಗಾಗಿ ಶ್ರಮಿಸಿದ್ದ ಶಿಕ್ಷಕ ದಿ. ನೂಜಿ ವೆಂಕಟ್ರಮಣ ಗೌಡರಿಗೆ ಇರ್ದೆ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ನಾರಾಯಣ ಕೆ. ನುಡಿ ನಮನ ಸಲ್ಲಿಸಿದರು.

ಶಿಕ್ಷಕ ಶಿವರಾಂ ಈಶ್ವರಮಂಗಲ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲೋಕಾನಂದ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News