ಸಹಕಾರಿ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಸರಕಾರ ವಿಫಲ: ಎಂ.ಎನ್. ರಾಜೇಂದ್ರಕುಮಾರ್
ಬೆಳ್ತಂಗಡಿ,ಜೂ.11: ಕೃಷಿಸಾಲ ವಿಚಾರದಲ್ಲಿ ಸಹಕಾರಿ ಬ್ಯಾಂಕ್‌ಗಳನ್ನು ಉಪಯೋಗಿಸಿಕೊಳ್ಳುವ ಸರಕಾರಗಳು ಸಹಕಾರಿ ಕ್ಷೇತ್ರಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಡುವಲ್ಲಿ ವಿಫಲವಾಗುತ್ತಿವೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಬ್ಯಾಂಕಿನ ಉಜಿರೆ ಶಾಖೆಯನ್ನು ಸನಿಹದ ಮಾವಂತೂರು ರೆಸಿಡೆನ್ಸಿಯ ಒಂದನೇ ಮಹಡಿಗೆ ಸ್ಥಳಾಂತರಗೊಳ್ಳುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ.ಕ.ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು ಕೃಷಿಗೆ ಹೆಚ್ಚು ಒತ್ತು ಕೊಟ್ಟು ರೈತರಿಗೆ ನೆರವಾಗುತ್ತಿವೆ. ಹೀಗಾಗಿ ರೈತರ ಆತ್ಮಹತ್ಯೆಗಳು ಜಿಲ್ಲೆಯಲ್ಲಿ ಇಲ್ಲವಾಗಿದೆ. ಅಲ್ಲದೆ ಸಹಕಾರಿ ಕ್ಷೇತ್ರಕ್ಕೆ ರೈತರ ಕೊಡುಗೆ ಅತೀ ದೊಡ್ಡದು. ಸರಕಾರಕ್ಕೆ ಕೃಷಿ ಸಾಲದ ವಿಚಾರದಲ್ಲಿ ಮಾತ್ರ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕುಗಳು ನೆನಪಿಗೆ ಬರುತ್ತದೆ. ಆದರೆ ಸಾಲದ ಮರುಪಾವತಿ ಮೇಲಿನ ಬಡ್ಡಿಯ ಬಿಲ್ಲು ಕಾಲಕ್ಕೆ ಸರಿಯಾಗಿ ನೀಡದಿರುವುದರಿಂದ ತೊಂದರೆಯಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳೂ ರೈತರಿಗೆ ಮುಳುವಾಗಿವೆ. ಸರಕಾರದ ಕೆಲವು ಧೋರಣೆಗಳು ಸಹಕಾರಿ ಬ್ಯಾಂಕುಗಳಲ್ಲಿ ಲಾಭಾಂಶ ಕಡಿಮೆಯಾಗಲು ಕಾರಣವಾಗಿವೆ. ಇದರಿಂದ ಸಹಕಾರಿ ಕ್ಷೇತ್ರಕ್ಕೆ ಹೊಡೆತ ಬೀಳುತ್ತಿದೆ.
ಸೊಸೈಟಿಗಳಲ್ಲಿನ ಪಡಿತರ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕುಗಳು ಮಾಡಬೇಕಾಗಿಲ್ಲದಿದ್ದರೂ ಸೇವಾ ದೃಷ್ಟಿಯಿಂದ, ಲಾಭ ನಷ್ಟದ ಲೆಕ್ಕಾಚಾರ ಹಾಕದೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ಇಷ್ಟೇ ಅಲ್ಲದೆ ನಬಾರ್ಡ್‌ನ ಶೇ. 40 ರಷ್ಟಿನ ಅನುದಾನವನ್ನು ಕಾಯದೇ ಸಹಕಾರಿ ಬ್ಯಾಂಕುಗಳು ತಮ್ಮ ಶೇ.60 ರಷ್ಟು ಹಣದಿಂದಲೇ ರೈತರಿಗೆ ಸಾಲ ನೀಡುತ್ತಿವೆ. ಬೇರೆ ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನು ಅಲ್ಲಿನ ಸಹಕಾರಿ ಬ್ಯಾಂಕುಗಳು ಮಾಡದಿರುವುದರಿಂದ ಅಲ್ಲಿ ರೈತರಿಗೆ ಸಮಸ್ಯೆಗಳುಂಟಾಗಿದೆ. 21 ವರ್ಷಗಳಿಂದ ನಮ್ಮ ಜಿಲ್ಲೆಯಲ್ಲಿ ಶೇ. 100 ರಷ್ಟು ಮರುಪಾವತಿಯಾಗುತ್ತಿದೆ. ಸ್ವಸಹಾಯ ಸಂಘದಲ್ಲೂ ಶೇ. 99 ರಷ್ಟು ಮರುಪಾವತಿಯಾಗುತ್ತಿದೆ ಎಂದರು.
2008 ರಲ್ಲಿ ಉಜಿರೆಯಲ್ಲಿ ಪ್ರಾರಂಭವಾದ ಬ್ಯಾಂಕಿನ ಶಾಖೆಯು ಸುಮಾರು 3,500 ಉಳಿತಾಯ ಖಾತೆಗಳನ್ನು ಹೊಂದಿದ್ದು, 19 ಕೋಟಿ ರೂ. ಠೇವಣಾತಿ ಇದೆ. ಸುಮಾರು ಏಳುವರೆ ರೂ. ಕೋಟಿಯಷ್ಟು ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ ಬ್ಯಾಂಕು ಸುಮಾರು 3,000 ಕೋಟಿ ರೂ.ಗಳಷ್ಟು ಠೇವಣಾತಿಯನ್ನು ಹೊಂದಿದ್ದು, 2300 ಕೋಟಿ ರೂ.ನಷ್ಟು ಸಾಲ ನೀಡಲಾಗಿದೆ ಎಂದರು.
ಜಿ.ಪಂ. ಸದಸ್ಯೆ ನಮಿತಾ, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಉಜಿರೆ ಸಿಎ ಬ್ಯಾಂಕ್ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಮುಂಡಾಜೆ ಸಿಎ ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಗೋಖಲೆ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ರಘುಚಂದ್ರ ರಾವ್, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಲಕ್ಷ್ಮಣ ಗೌಡ, ಪಡಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಯೋಗಿಶ್ ಕುಮಾರ್ ನಡಕರ, ಕಟ್ಟಡದ ಮಾಲಕ ಪದ್ಮರಾಜ ಬಲ್ಲಾಳ್, ಸುಲ್ಕೇರಿಮೊಗ್ರು ಸಿಎ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ, ಕಳಿಯ ಸಿಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಹರಿ ಪ್ರಸಾದ್ ಮತ್ತಿತರರು ಇದ್ದರು.
ಬ್ಯಾಂಕಿನ ವ್ಯವಸ್ಥಾಪಕಿ ಮಾಲಾ ಎಂ.ಕೆ. ಮತ್ತು ಸಿಬ್ಬಂದಿ ಸ್ವಾಗತಿಸಿದರು.