×
Ad

ಕಾಪು: ಹೋಬಳಿ ಮಟ್ಟದ ಕೃಷಿ ಅಭಿಯಾನ

Update: 2016-06-11 23:12 IST

ಪಡುಬಿದ್ರೆ, ಜೂ.11: ಕಾರ್ಮಿಕರ ಸಮಸ್ಯೆಯಿಂದ ಕರಾವಳಿಯಲ್ಲಿ ಭತ್ತದ ಕೃಷಿ ಕುಂಠಿತಕ್ಕೆ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ ಬೇಸರ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಜೆಸಿಐ ಸಹಯೋಗದಲ್ಲಿ ಕಾಪು ಜೇಸಿಐ ಭವನದಲ್ಲಿ ಶನಿವಾರ ನಡೆದ ಕಾಪು ಹೋಬಳಿ ಮಟ್ಟದ ಕೃಷಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭತ್ತದ ಕೃಷಿಗೆ ಯಂತ್ರೋಪಕರಣಗಳ ಬಳಕೆಗೆ ಇಲಾಖೆ ಉತ್ತೇಜನ ನೀಡಬೇಕು. ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ಹಾಗೂ ಸೂಕ್ತ ಫಲಾನುಭವಿಗಳನ್ನು ಗುರುತಿಸಬೇಕು. ಕೃಷಿಯಲ್ಲಿ ಸಾವಯವ ಗೊಬ್ಬರ ಹಾಗೂ ಸುಧಾರಿತ ಯಂತ್ರೋಪಕರಣಗಳ ಬಳಕೆಗೆ ರೈತರು ಮುಂದಾಗಬೇಕು, ಅದಕ್ಕೆ ಕೃಷಿ ಇಲಾಖೆ ಪ್ರೇರೇಪಿಸಬೇಕು ಎಂದರು.

ಮಣ್ಣು ಆರೋಗ್ಯ ಕಾರ್ಡ್

ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜು ಮಾತನಾಡಿ, ಈಗಾಗಲೇ 15 ಸಾವಿರ ಮಣ್ಣು ಮಾದರಿಗಳನ್ನು ಪರೀಕ್ಷಿಸಲಾಗಿದೆ. 30 ಸಾವಿರ ಮಣ್ಣು ಮಾದರಿ ಪರೀಕ್ಷೆ ನಡೆಸಿ ಮಣ್ಣು ಆರೋಗ್ಯ ಕಾರ್ಡ್ ನೀಡಲಾಗುವುದು ಎಂದು ಮಾಹಿತಿ ನೀಡಿದರು

. ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಒಂದೂವರೆ ಪಟ್ಟು ಹೆಚ್ಚು ಬಿತ್ತನೆಗೆ ಭತ್ತದ ಬೀಜವನ್ನು ವಿತರಿಸಲಾಗಿದೆ. ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಪ್ರೇರೇಪಿಸಲು ಕೃಮ ಕೈಗೊಳ್ಳಲಾಗುವುದು. ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆ ನಿರಂತರವಾಗಿ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ಕಾಪು ಪುರಸಬೆ ಅಧ್ಯಕ್ಷೆ ಸೌಮ್ಯಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ಹೆರಾಲ್ಡ್ ಫೆರ್ನಾಂಡಿಸ್, ತಾಲೂಕು ಪಂಚಾಯತ್ ಸದಸ್ಯರಾದ ಸುಜಾತ ಶಂಕರ್ ಸುವರ್ಣ, ಗೀತಾ ವಾಗ್ಲೆ, ಶಶಿಪ್ರಭಾ ಎಸ್. ಶೆಟ್ಟಿ, ಯು.ಸಿ. ಶೇಖಬ್ಬ, ಕೇಶವ ಮೊಯ್ಲಿ, ದಿನೇಶ್ ಕೋಟ್ಯಾನ್, ರೇಣುಕಾ, ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ್ ಕುಮಾರ್, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಪಶುವೈದ್ಯಾಧಿಕಾರಿ ಡಾ. ದಯಾನಂದ ಪೈ, ಜೆಸಿಐ ಅಧ್ಯಕ್ಷೆ ಸೌಮ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News