ಭಾರತ ಸರಕಾರ ಅಮೆರಿಕದ ಅತ್ಯುತ್ತಮ ಮಿತ್ರ: ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್
ವಾಶಿಂಗ್ಟನ್, ಜೂ. 11: ಭಾರತ ಸರಕಾರವು ಅಮೆರಿಕದ ಅತ್ಯುತ್ತಮ ಮಿತ್ರದೇಶವಾಗುತ್ತಿದೆ ಹಾಗೂ ಈ ಬಾಂಧವ್ಯವನ್ನು ಪೋಷಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಪೌಲ್ ರಯನ್ ಹೇಳಿದ್ದಾರೆ.
ವಾಶಿಂಗ್ಟನ್‌ನಲ್ಲಿ ಮಾಡಿದ ತನ್ನ ಮಹತ್ವದ ವಿದೇಶ ನೀತಿ ಭಾಷಣದಲ್ಲಿ ಅವರು ಮಾತನಾಡುತ್ತಿದ್ದರು. ತನ್ನ ಭಾಷಣದುದ್ದಕ್ಕೂ ಅಧ್ಯಕ್ಷ ಬರಾಕ್ ಒಬಾಮರ ನೀತಿಗಳನ್ನು ಕಟುವಾಗಿ ಟೀಕಿಸಿದರು. ತನ್ನ ಭಾಷಣದಲ್ಲಿ ಅವರು ಪ್ರಶಂಸಿಸಿದ ಒಂದೇ ಒಂದು ವಿಷಯವೆಂದರೆ ಭಾರತ-ಅಮೆರಿಕ ಬಾಂಧವ್ಯ. ‘‘ವಿಶೇಷವಾಗಿ ಮೋದಿಯ ಆಡಳಿತದಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯ ದೃಢಗೊಳ್ಳಬೇಕಾದ ಅಗತ್ಯವಿದೆ. ಈ ವಿಷಯದ ಬಗ್ಗೆ ನಾನು ಮತ್ತು ಮೋದಿ ನಿನ್ನೆ ಸುದೀರ್ಘ ಮಾತುಕತೆ ನಡೆಸಿದೆವು. ಮುಖ್ಯವಾಗಿ ಸಮುದ್ರಗಳ- ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳು- ವಿಷಯದಲ್ಲಿ ಭವಿಷ್ಯದ ಭಾರತ-ಅಮೆರಿಕ ಸಂಬಂಧಕ್ಕೆ ಹೆಚ್ಚಿನ ಮಹತ್ವವಿದೆ. ವಿವಾದಾಸ್ಪದ ಜಲಪ್ರದೇಶಗಳಲ್ಲಿನ ದ್ವೀಪಗಳಲ್ಲಿ ಚೀನಾ ರನ್‌ವೇಗಳನ್ನು ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಮೇಲೆ ನಿಗಾ ಇಡಲು ಈ ಬಾಂಧವ್ಯ ನೆರವಾಗುತ್ತದೆ’’ ಎಂದು ರಯನ್ ಹೇಳಿದರು.