ಫರಂಗಿಪೇಟೆ ಸಮೀಪ ರಸ್ತೆ ದುರಂತ, ಐದು ಮೃತದೇಹಗಳ ಅಂತ್ಯ ಸಂಸ್ಕಾರ
ಬಂಟ್ವಾಳ, ಜೂ. 11: ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಸಮೀಪದ ಅರ್ಕುಳ ವಳಚ್ಚಿಲ್ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದ ಮುಹಮ್ಮದ್ ನಝೀರ್, ಮುಹಮ್ಮದ್ ಸಲಾಂ, ಮುಹಮ್ಮದ್ ಉನೈಸ್‌ರವರ ಮೃತದೇಹಗಳ ಅಂತ್ಯ ಸಂಸ್ಕಾರ ಶನಿವಾರ ಮುಂಜಾನೆ ಹಾಗೂ ವಿದ್ಯಾರ್ಥಿ ಸಿನಾನ್ ಮತ್ತು ಶಾಬಿ ಅಬ್ಬಾಸ್‌ರ ಅಂತ್ಯ ಸಂಸ್ಕಾರ ಬೆಳಗ್ಗೆ 9:30ರ ಸುಮಾರಿಗೆ ನೂರಾರು ಜನರ ಸಮ್ಮುಖದೊಂದಿಗೆ ನೆರವೇರಿತು.
ವಿಧಿಯಾಟಕ್ಕೆ ಬಲಿಯಾದವರ ತಂದೆ, ತಾಯಿ, ಸಹೋದರ, ಸಹೋದರಿ ಸೇರಿದಂತೆ ಕುಟುಂಬಸ್ಥರು ದುಃಖತಪ್ತರಾಗಿ ಕಣ್ಣೀರು ಸುರಿಸುತ್ತಿದ್ದು, ಮನೆಗಳಲ್ಲಿ ನೀರವ ವೌನ ಆವರಿಸಿದೆ. ಮೃತ ಮುಹಮ್ಮದ್ ನಝೀರ್ (29) ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರದ ನಿವಾಸಿ ಯೂಸುಫ್ ಎಂಬವರ ಪುತ್ರನಾಗಿದ್ದು, ವೃತ್ತಿಯಲ್ಲಿ ಆಟೊ ಚಾಲಕ. ಯೂಸುಫ್‌ರ 4 ಗಂಡು, 7 ಹೆಣ್ಣು ಮಕ್ಕಳ ಪೈಕಿ ನಝೀರ್ 7ನೆಯವರು. ವಿವಾಹಿತನಾಗಿದ್ದ ನಝೀರ್‌ಗೆ ಮುಹಮ್ಮದ್ ರಾಝಿಲ್ ಎಂಬ 3 ತಿಂಗಳ ಮಗುವಿದೆ. ಮುಹಮ್ಮದ್ ಸಲಾಂ (22) ನಂದಾವರದ ಸಿದ್ದೀಕ್ ಎಂಬವರ ಪುತ್ರನಾಗಿದ್ದು, ಸಿದ್ದೀಕ್‌ರ 6 ಹೆಣ್ಣು, 4 ಗಂಡು ಮಕ್ಕಳಲ್ಲಿ 7ನೆಯವರು. ಅವಿವಾಹಿತನಾಗಿದ್ದ ಸಲಾಂ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಅಪಘಾತದಿಂದ ಗಾಯಗೊಂಡಿರುವ ನಂದಾವರದ ನಿವಾಸಿಗಳಾದ ಅಬ್ದುಲ್ ಖಾದರ್‌ರ ಪುತ್ರ ಝಮೀರ್ ಮತ್ತು ಶೇಕಬ್ಬ ಎಂಬವರ ಪುತ್ರ ಶೌಕತ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಝಮೀರ್, ಶೌಕತ್, ನಝೀರ್, ಸಲಾಂ ನೆರೆಕರೆ ಮಾತ್ರವಲ್ಲದೆ ಸ್ನೇಹಿತರು ಕೂಡಾ ಆಗಿದ್ದರು. ಶುಕ್ರವಾರ ಸಂಜೆ 3 ಗಂಟೆಯವರೆಗೆ ಈ ನಾಲ್ಕು ಮಂದಿ ನಂದಾವರ ಪರಿಸರದಲ್ಲೇ ಒಟ್ಟಿಗೆ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪೈಕಿ ಸಲಾಂ ಮೊಬೈಲ್ ರೀಚಾರ್ಜ್ ಮಾಡಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಆ ಬಳಿಕವೂ ತನಗೆ ಕರೆ ಮಾಡಿ ಯಾವ ಸಿಮ್‌ಗೆ ರೀಚಾರ್ಜ್ ಎಂದು ಕೇಳಿದ್ದ ಎಂದು ಕಣ್ಣೀರಿಡುತ್ತಾ ಸಲಾಂರ ತಂದೆ ಸಿದ್ದೀಕ್ ಮನೆಗೆ ಭೇಟಿ ನೀಡಿದ್ದ ಪತ್ರಕರ್ತರಿಗೆ ತಿಳಿಸಿದ್ದಾರೆ. ಸಿನಾನ್ (16) ಮಾರಿಪಳ್ಳ ನಿವಾಸಿ ಹಮೀದ್ ಎಂಬವರ ಪುತ್ರನಾಗಿದ್ದು, ಮಂಗಳೂರಿನ ಸ್ಟಾರ್ ಟುಟ್ಯೋರಿಯಲ್‌ನ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದ. ಹಮೀದ್‌ರ 4 ಹೆಣ್ಣು, 2 ಗಂಡು ಮಕ್ಕಳಲ್ಲಿ ಸಿನಾನ್ 4ನೆಯವರು. ಶಾಲೆ ಆರಂಭವಾದ 10 ದಿವಸಗಳಿಂದ ಬಸ್‌ನಲ್ಲಿ ಹೋಗಿ ಬರುತ್ತಿದ್ದ ಸಿನಾನ್ ಶುಕ್ರವಾರ ಕೂಡಾ ಎಂದಿನಂತೆ ಸಂಜೆ ಶಾಲೆ ಮುಗಿಸಿ ಮನೆಗೆ ತೆರಳಲು ಬಸ್ ಹತ್ತಿದ್ದ. ಅಪಘಾತಕ್ಕೊಳಗಾದ ರಿಕ್ಷಾದಲ್ಲಿದ್ದ ನಂದಾವರದ ನಿವಾಸಿಗಳು ಸಿನಾನ್‌ನ ಸ್ನೇಹಿತರಾಗಿದ್ದು, ಅವರ ಫೋನ್ ಕರೆಯ ಮೇರೆಗೆ ಪಡೀಲ್‌ನಲ್ಲಿ ಬಸ್‌ನಿಂದ ಇಳಿದು ಆಟೊರಿಕ್ಷಾ ಹತ್ತಿ ಬರುತ್ತಿದ್ದಾಗ ವಿಧಿ ಕಾಡಿತ್ತು ಎಂದು ಸಿನಾನ್‌ನ ಕುಟುಂಬಸ್ಥರು ನೋವಿನಿಂದ ನುಡಿದರು. ಮುಹಮ್ಮದ್ ಉನೈಸ್(20) ಅಡ್ಯಾರ್‌ನ ಬಿರ್ಪುಗುಡ್ಡೆಯ ಇಬ್ರಾಹೀಂ ಎಂಬವರ ಪುತ್ರ. 3 ಹೆಣ್ಣು, 2 ಗಂಡು ಮಕ್ಕಳಲ್ಲಿ ಉನೈಸ್ 3ನೆಯವರು. ಉನೈಸ್ ಕಿರಿಯ ಗಂಡು ಮಗನಾಗಿದ್ದ. ವಳಚ್ಚಿಲ್‌ನಲ್ಲಿರುವ ತನ್ನ ತಾಯಿಯ ಅಕ್ಕನ ಮನೆಯಲ್ಲಿ ವಾಸವಾಗಿದ್ದ ಉನೈಸ್, ಶುಕ್ರವಾರ ಸಂಜೆ ವಳಚ್ಚಿಲ್‌ನ ಮನೆಯಲ್ಲಿ ಇಫ್ತಾರ್ ಕೂಟಕ್ಕಾಗಿ ಬಿರ್ಪುಗುಡ್ಡೆಯಲ್ಲಿದ್ದ ತನ್ನ ತಂಗಿಯನ್ನು ಬಸ್‌ನಲ್ಲಿ ಕರೆ ತಂದು ವಳಚ್ಚಿಲ್‌ನಲ್ಲಿ ಇಳಿಸಿ ಫರಂಗಿಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಅವಿವಾಹಿತನಾಗಿದ್ದ ಉನೈಸ್ ಐಟಿಐ ವಿದ್ಯಾಭ್ಯಾಸ ಮಾಡಿ ಇಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದ. ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಪಾಡೀಲು ನಿವಾಸಿ ಬಟ್ಟೆ ವ್ಯಾಪಾರಿ ಶಾಬಿ ಅಬ್ಬಾಸ್ (48), ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಮೃತರು ಬಟ್ಟೆ ವ್ಯಾಪಾರ ನಡೆಸುತ್ತಿದ್ದು, ತನ್ನ 800 ಕಾರಿನಲ್ಲಿ ಮಂಗಳೂರಿನಿಂದ ವ್ಯಾಪಾರಕ್ಕೆಂದು ಬಟ್ಟೆಗಳನ್ನು ಖರೀದಿಸಿ ಊರಿಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು.
ಮೃತರ ಮನೆಗಳಿಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗಡೆ, ವಿಟ್ಲ ಕಂದಾಯ ನಿರೀಕ್ಷಕ ದಿವಕರ್, ಸಹಾಯಕ ಗಿರೀಶ್, ವೀರಕಂಬ ಗ್ರಾಮಕ ರಣಿಕ ಕರಿಬಸಪ್ಪಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.