×
Ad

ಮಾಣಿಯಲ್ಲಿ ಭೀಕರ ಅಪಘಾತ, ಮೂವರು ಮೃತ್ಯು

Update: 2016-06-12 16:06 IST

ಬಂಟ್ವಾಳ, ಜೂ.12: ನೇರಳಕಟ್ಟೆ ಸಮೀಪದ ಕೊಡಾಜೆಯ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

 ಓಮ್ನಿ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಮೃತರನ್ನು ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಸಿಬ್ಬಂದಿಯಾದ ಸಂಧ್ಯಾ, ನಯನಾ ಹಾಗೂ ಓಮ್ನಿ ಕಾರಿನ ಚಾಲಕ ತೇಜಸ್ ಎಂದು ಗುರುತಿಸಲಾಗಿದೆ.
 
ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಮಳಿಗೆಯ 11 ಮಂದಿ ಸಿಬ್ಬಂದಿ ಪಣೋಲಿಬೈಲಿನ ದೈವಸ್ಥಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಪುತ್ತೂರಿನಿಂದ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರಿದ್ದ ಓಮ್ನಿ ಕಾರು ಕೊಡಾಜೆ ತಲುಪಿದೆ ವೇಳೆ ಎದುರಿದ್ದ ಆಟೊ ರಿಕ್ಷಾವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸ್ ಬಸ್‌ಗೆ ಢಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಓಮ್ನಿ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓಮ್ನಿಯಲ್ಲಿದ್ದ ಇತರ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಈ ಪೈಕಿ ಮೂವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು ಆಸ್ಪತೆಯ ಮುಂದೆ ಕುಟುಂಬಸ್ಥರ ರೋಧನ

 ಕೊಡಾಜೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಡಿದ ಮೂವರು ಹಾಗೂ ಗಾಯಗೊಂಡ 7 ಮಂದಿ ಪುತ್ತೂರು ಆಸುಪಾಸಿನ ನಿವಾಸಿಗಳಾಗಿದ್ದು ಭಾನುವಾರ ಸಂಜೆ ವೇಳೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ 3 ಮೃತದೇಹಗಳನ್ನು ತರಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ಸಾಕಷ್ಟು ಜನ ಸೇರಿದ್ದು, ಮೃತರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

ಮೃತ ತೇಜಸ್(22) ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಕಾಡ್ಲ ನಿವಾಸಿ ಲಕ್ಷ್ಮಣ ಪೂಜಾರಿ ಎಂಬವರ ಪುತ್ರ. ಇವರು ಕಳೆದ ಕೆಲವು ವರ್ಷಗಳಿಂದ ಸಂಜೀವ ಶೆಟ್ಟಿ ಅವರ ಜವಳಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದುರಂತಕ್ಕೆ ಕಾರಣವಾದ ಓಮ್ನಿ ಕಾರನ್ನು ಇವರು ಚಲಾಯಿಸುತ್ತಿದ್ದರು. ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ. ಮೃತ ವರ್ಷಾ(19) ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿನ ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರಿ. ಇವರು ಬೆಟ್ಟಂಪಾಡಿ ಸರ್ಕಾರಿ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, 2ನೇ ವರ್ಷದ ಪದವಿಯಲ್ಲಿ ಕಲಿಯುತ್ತಿದ್ದಾರೆ. ರಜೆಯ ಸಮಯದಲ್ಲಿ ಶಾಲಾ ಖರ್ಚುವೆಚ್ಚಗಳನ್ನು ಭರಿಸಲೆಂದು ಜವಳಿ ಅಂಗಡಿಯಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಅಪಘಾತದಿಂದ ಮೃತದೇಹದ ಮುಖಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಪರಿಚಯವೇ ಸಿಗದಂತಹ ಸ್ಥಿತಿಯಲ್ಲಿದೆ.

ಮೃತರು ತಂದೆ, ತಾಯಿ ಹಾಗೂ ಓರ್ವ ತಂಗಿಯನ್ನು ಅಗಲಿದ್ದಾರೆ.

ಮೃತ ಸಂದ್ಯಾ(21) ಪುತ್ತೂರು ತಾಲೂಕಿನ ಒಳಮೊಗ್ರು ನಿವಾಸಿ ಶಿವಕುಮಾರ್ ಅವರ ಪುತ್ರಿ. “ನನ್ನ ಮಗಳು, ನಾನು ಇಂದು ಪಣೊಲಿಬೈಲ್‌ಗೆ ಹೋಗುತ್ತೇನೆ ಬರುವಾಗ ತಡವಾಗಬಹುದು ಎಂದು ಹೇಳಿ ಹೋಗಿದ್ದಾಳೆ ಅವಳಿಗೆ ಏನಾಗಿದೆ ಹೇಳಿ ನನ್ನ ಮಗಳನ್ನು ತೋರಿಸಿಯೆಂದು ಆಸ್ಪತ್ರೆಯಲ್ಲಿ ತಾಯಿ ಗೋಳಿಡುತ್ತಿರುವುದು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

ಮೃತ ಸಂದ್ಯಾ ತಂದೆ, ತಾಯಿ, ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

 ಬನ್ನೂರು ನಿವಾಸಿ ಶರಣ್ಯ(18), ನವ್ಯ(18), ರೋಟರಿಪುರ ನಿವಾಸಿಗಳಾದ ನಮಿತಾ(23), ನಯನಾ(19), ಪವಿತ್ರಾ(20), ಬೆಳಿಯಪ್ಪ ಪೂಜಾರಿ ಎಂಬವರ ಪುತ್ರ ಯಕ್ಷಿತ್(19), ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಸುಮಿತ್ರ(20) ಗಾಯಗೊಂಡವರು. ಈ ಪೈಕಿ ಗಂಭೀರ ಗಾಯಗಳಾಗಿರುವ ಶರಣ್ಯ, ನಮಿತಾ, ನಯನಾ ಮತ್ತು ಪವಿತ್ರಾ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುನಿಲ್ ಮತ್ತು ನವ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News