ದ.ಕ.ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯೆಂದು ಘೋಷಣೆಗೆ ಪ್ರಯತ್ನ : ರಮಾನಾಥ ರೈ
ಮಂಗಳೂರು,ಜೂ .12: ಸೆಪ್ಟೆಂಬರ್ ತಿಂಗಳಿನಲ್ಲಿ ದ.ಕ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನವು ನಡೆಯುತ್ತಿದ್ದು, ಇದಕ್ಕೆ ಜನರ ಸಹಕಾರವು ಅಗತ್ಯ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ನಗರದ ಪುರಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮನಪಾ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ,ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ, ಮಕ್ಕಳ ಸಹಾಯವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕ ನಿಷೇಧ ಕಾಯ್ದೆ ಇದ್ದರೂ ಮಕ್ಕಳನ್ನು ದುಡಿಸುವಂತಹ ಕಾರ್ಯ ನಡೆಯುತ್ತಲೆ ಇದೆ. ಮಕ್ಕಳನ್ನು ಪಾಲನೆ ಪೋಷಣೆ ಮಾಡಬೇಕಾದ ಹೆತ್ತವರಿಗೆ ಮಕ್ಕಳಿಗೆ ಶಿಕ್ಷಣ ನೀಡುವ ಹೊಣೆಗಾರಿಕೆ ಇದೆ.ನಾನಾ ಕಾರಣಗಳಿಗೆ ಮಕ್ಕಳನ್ನು ದುಡಿಸಲಾಗುತ್ತಿದ್ದು ಇದನ್ನು ತೊಡೆದು ಹಾಕುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಮಕ್ಕಳನ್ನು ದುಡಿಸಿ ಊಟ ಮಾಡುವ ಹೆತ್ತವರು ತಿನ್ನುವುದು ಅನ್ನವಲ್ಲ, ಅದೊಂದು ವಿಷವೆಂಬುದನ್ನು ಅರಿತುಕೊಳ್ಳಬೇಕು. ಹೆತ್ತವರು ದುಡಿದು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಬೇಕೆ ಹೊರತು ಮಕ್ಕಳನ್ನು ದುಡಿಸಿ ಅವರ ದುಡ್ಡಿನಲ್ಲಿ ತಿನ್ನುವುದು ಸರಿಯಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಸಲಹಾ ಕೇಂದ್ರದ 20 ಅನಾಥ ಮಕ್ಕಳಿಗೆ ಶಾಲಾಬ್ಯಾಗ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ನೇತ್ರಾ ಎಂಬ ಬಾಲಕಿ ಮಾತನಾಡಿ 9 ವರ್ಷವಿರುವಾಗಲೆ ಅಪ್ಪ ಅಮ್ಮನನ್ನು ಕಳೆದುಕೊಂಡ ನಾನು ಬಾಲಕಾರ್ಮಿಕೆಯಾಗಿ ದುಡಿದಿದ್ದೆ. ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ರಕ್ಷಿಸಿ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಹಾಕಿದ ಕಾರಣಕ್ಕೆ ನಾನು ಇದೀಗ ವಿದ್ಯಾಭ್ಯಾಸ ಮಾಡುತಿದ್ದೇನೆ. ನನ್ನಂತೆಯೆ ಇತರ ಬಾಲಕಾರ್ಮಿಕರನ್ನು ರಕ್ಷಿಸಲು ನಾನು ಪೊಲೀಸ್ ಅಧಿಕಾರಿಯಾಗುವ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ದ.ಕ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಪಾಟೀಲ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಕೆ.ನಿಕೇಶ್ ಶೆಟ್ಟಿ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಹೆಚ್.ಡಿ’ಮೆಲ್ಲೋ , ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಡಿಸಿಪಿ ಕೆ.ಎಂ. ಶಾಂತರಾಜು, ಪಡಿ ಚೈಲ್ಡ್‌ಲೈನ್ ನಿರ್ದೇಶಕ ರೆನ್ನಿ ಡಿಸೋಜ, ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.