×
Ad

ಉಪ್ಪಿನಂಗಡಿ : ತಿರುಪತಿ ಯಾತ್ರಾರ್ಥಿಯ ನಗದು ಲೂಟಿ

Update: 2016-06-12 20:08 IST

ಉಪ್ಪಿನಂಗಡಿ ,ಜೂ.12: ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ ವ್ಯಕ್ತಿಗೆ ತಂಡವೊಂದು ಹಲ್ಲೆ ನಡೆಸಿ, ಆತನಲ್ಲಿದ್ದ ಮೊಬೈಲ್ ಫೋನ್, ನಗದು ಲೂಟಿ ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ಶನಿವಾರ ನಡೆದಿದೆ. ಈ ಕಳ್ಳರ ತಂಡದ ಓರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದು, ಇನ್ನೊಬ್ಬಾತ ಪರಾರಿಯಾಗಿದ್ದಾನೆ.

ಸಾರ್ವಜನಿಕರ ಕೈಗೆ ಬಂಟ್ವಾಳ ಮೂಲದ ಅಭಿಜಿತ್ ಸಿಕ್ಕಿ ಬಿದ್ದಿದ್ದಾನೆ. ಈತ ಹಾಗೂ ಇನ್ನೊಬ್ಬಾತ ವ್ಯಕ್ತಿಯೋರ್ವರನ್ನು ದರೋಡೆ ನಡೆಸಿದ್ದರು.

  ತಿರುಪತಿ ಯಾತ್ರೆಗೆ ತೆರಳಿದ ಕಡಬ ಮೂಲದ ವಿಶ್ವನಾಥ ಪೂಜಾರಿಯವರು ಶನಿವಾರ ಮುಂಜಾನೆ ಉಪ್ಪಿನಂಗಡಿಯಲ್ಲಿ ಬಂದಿಳಿದಿದ್ದು, ತನ್ನೂರಿಗೆ ತೆರಳಲು ಆ ಸಂದರ್ಭ ಯಾವುದೇ ಬಸ್ ಇಲ್ಲದ್ದರಿಂದ ನೇತ್ರಾವತಿ ನದಿಗೆ ತೆರಳಿ ಸ್ನಾನ ಮಾಡಿ, ಬಳಿಕ ದೇವಸ್ಥಾನಕ್ಕೆ ತೆರಳಲು ನಿರ್ಧರಿಸಿದ್ದರು. ಸ್ನಾನಕ್ಕೆಂದು ಉಪ್ಪಿನಂಗಡಿ ಬಸ್ ನಿಲ್ದಾಣ ಸಮೀಪದ ನೇತ್ರಾವತಿ ಸೇತುವೆಯ ಬಳಿಯಿಂದ ನದಿಗಿಳಿದ್ದರು. ಕತ್ತಲಲ್ಲಿ ಅಲ್ಲಿಗೆ ಬಂದ ಯುವಕರಿಬ್ಬರು ವಿಶ್ವನಾಥ ಪೂಜಾರಿಯವರಿಗೆ ಹಿಗ್ಗಾಮುಗ್ಗಾ ಥಳಿಸಿ, ಅವರಲ್ಲಿದ್ದ ಮೊಬೈಲ್ ಫೋನ್, ನಗದನ್ನು ಕಸಿದುಕೊಂಡು ದೇವಸ್ಥಾನದ ಕಡೆಗೆ ನದಿಯಲ್ಲೇ ಪರಾರಿಯಾದರು. ವಿಶ್ವನಾಥ ಪೂಜಾರಿಯವರು ಈ ಸಂದರ್ಭ ಬೊಬ್ಬಿಟ್ಟಿದ್ದು, ಇದನ್ನು ಕೇಳಿ ನದಿಯ ಆಚೆ ಬದಿಯಲ್ಲಿದ್ದ ವ್ಯಕ್ತಿಯೋರ್ವರು ಬಸ್‌ನಿಲ್ದಾಣದ ಬಳಿಗೆ ಬಂದು ವಿಶ್ವನಾಥ ಪೂಜಾರಿಯವರನ್ನು ವಿಚಾರಿಸಿದಾಗ ನದಿಯಲ್ಲಿ ಲೂಟಿಕೋರರ ತಂಡವಿರುವುದು ತಿಳಿದುಬಂತು. ಕೂಡಲೇ ಸ್ಥಳೀಯ ಕೆಲವರು ಈ ಕಳ್ಳರ ಪತ್ತೆಗೆ ಮುಂದಾಗಿದ್ದು, ಸೀದಾ ದೇವಸ್ಥಾನದ ಬಳಿ ತೆರಳಿದರು. ಈ ಸಂದರ್ಭ ಅಲ್ಲಿ ಇದೇ ಯುವಕರಿರುವುದು ಕಂಡು ಬಂದು ಅವರನ್ನು ಬೆನ್ನಟ್ಟಿದ್ದಾಗ ಓರ್ವ ಓಡಿ ತಪ್ಪಿಸಿಕೊಂಡಿದ್ದು, ಇನ್ನೋರ್ವ ರಥಬೀದಿಯ ಗಣಪತಿ ದೇವಸ್ಥಾನದ ಬಳಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ವಿಚಾರಿಸಿದಾಗ ಈತನ ಬಳಿ ಐದು ಮೊಬೈಲ್ ಇರುವುದು ಪತ್ತೆಯಾಗಿದೆ. ಬಳಿಕ ಈತನನ್ನು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸಲಾಯಿತು. ಈತನನ್ನು ವಶಕ್ಕೆ ಪಡೆದುಕೊಂಡ ಉಪ್ಪಿನಂಗಡಿ ಪೊಲೀಸರು ಬಳಿಕ ಯುವಕರಿಂದ ಲೂಟಿಗೊಳಗಾಗಿದ್ದ ವಿಶ್ವನಾಥ ಪೂಜಾರಿಯವರನ್ನು ಕರೆದು ಅವರ ಮೊಬೈಲ್ ಹಾಗೂ ನಗದನ್ನು ವಾಪಸ್ ನೀಡಿ ಕಳುಹಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯ: ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದರೂ ಈ ಪ್ರಕರಣದ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

   ಒಂಟಿ ವ್ಯಕ್ತಿಗಳು ನದಿ ದಡದಲ್ಲಿ ಲೂಟಿಗೊಳಗಾದ ಪ್ರಕರಣಗಳು ಇದಕ್ಕೂ ಮೊದಲು ಇಲ್ಲಿ ನಡೆದಿತ್ತು. ಆದರೆ ಈ ಬಗ್ಗೆ ದೂರು ನೀಡಲು ಯಾರೂ ಮುಂದಾಗುತ್ತಿರಲಿಲ್ಲ. ಕಡವಿನ ಬಾಗಿಲು, ಬನ್ನೆಂಗಳ ಮತ್ತಿತರ ಕಡೆಗಳಿಗೆ ತೆರಳಲು ನೇತ್ರಾವತಿ ನದಿಯನ್ನು ದಾಟಿ ಹೋಗುವುದು ಹತ್ತಿರದ ದಾರಿಯಾಗಿದೆ. ಆದ್ದರಿಂದ ಹಲವರು ರಾತ್ರಿ ಸಮಯದಲ್ಲಿ ಇದೇ ದಾರಿಯಾಗಿ ತೆರಳುತ್ತಾರೆ. ಇದರಲ್ಲಿ ದರೋಡೆಕೋರರ ತಂಡದ ದೊಡ್ಡ ಜಾಲವೇ ಇರುವ ಶಂಕೆಯಿದ್ದು, ರಾತ್ರಿ ಸಮಯದಲ್ಲಿ ನೇತ್ರಾವತಿ ನದಿ ದಡದಲ್ಲಿಯೇ ಬೀಡು ಬಿಟ್ಟು ಒಂಟಿ ವ್ಯಕ್ತಿಗಳನ್ನು ಲೂಟಿ ಮಾಡುವ ಕಾಯಕವನ್ನೇ ಇವರು ಮಾಡಿಕೊಂಡಿರುವ ಶಂಕೆ ಇದೆ. ಆದ್ದರಿಂದ ಸಾರ್ವಜನಿಕರು ಹಿಡಿದು ಕೊಟ್ಟ ಯುವಕನ ಮೇಲೆ ಸಾಮಾನ್ಯ ಪಿಕ್‌ಪಾಕೆಟ್ ಪ್ರಕರಣ ದಾಖಲಿಸಿ, ಬಿಟ್ಟು ಬಿಡದೇ, ಈ ಬಗ್ಗೆ ತೀವ್ರ ತನಿಖೆ ನಡೆಸಿದರೆ, ಸತ್ಯಾಂಶ ಹೊರಬರಲು ಸಾಧ್ಯ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News