ಖಾಸಗಿ ಬಸ್ಸು – ಟಿಪ್ಪರ್ ಡಿಕ್ಕಿ: 11 ಮಂದಿಗೆ ಗಾಯ
ಉಪ್ಪಿನಂಗಡಿ: ಟಿಪ್ಪರ್ ಲಾರಿಯೊಂದು ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ 11 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ನೀರಕಟ್ಟೆ ಜಂಕ್ಷನ್ ಬಳಿ ನಡೆದಿದೆ.
ಘಟನೆಯಿಂದ ಬಸ್‌ನಲ್ಲಿದ್ದ ಯಶೋಧಾ (37), ಅನೂಷ (8), ಪ್ರತೀಕಾ (18), ಸುಶೀಲಾ (53), ಸೀತಮ್ಮ (60), ವೇದಾವತಿ (67) ಹಾಗೂ ಆದರ್ಶ ಎಂಬವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಲಾ (78) ಎಂಬವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭರತ್ (37), ಗೋವಿಂದ (60) ಹಾಗೂ ಮುತ್ತು (68) ಎಂಬವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ. ಇವರೆಲ್ಲಾ ಉಪ್ಪಿನಂಗಡಿ, ನೆಲ್ಯಾಡಿ, ಕೊಕ್ಕಡ, ಶಿಬಾಜೆ ಕಡೆಯ ನಿವಾಸಿಗಳು. ಉಪ್ಪಿನಂಗಡಿಯಿಂದ ಶಿಶಿಲಕ್ಕೆ ತೆರಳುವ ಖಾಸಗಿ ಬಸ್‌ಗೆ ನೀರಕಟ್ಟೆ ಜಂಕ್ಷನ್ ಬಳಿಯ ತಿರುವಿನಲ್ಲಿ ಟಿಪ್ಪರ್ ಲಾರಿ ಡಿಕ್ಕಿಯಾಯಿತು. ಮರಳು ಸಾಗಣೆಗೆಂದು ಈ ಟಪ್ಪರ್ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗದಲ್ಲಿ ಬರುತ್ತಿದ್ದು, ನೀರಕಟ್ಟೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ನೆಲ್ಯಾಡಿ ಕಡೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ಟಿಪ್ಪರ್ ಲಾರಿಯು ನೇರವಾಗಿ ಬಂದು ಚಾಲಕನ ಹಿಂಬದಿಯಿರುವ ಮಹಿಳಾ ಸೀಟಿನ ಕಡೆಗೆ ಡಿಕ್ಕಿಯಾಗಿದ್ದು, ಇದರಿಂದ ಹೆಚ್ಚಿನ ಮಹಿಳೆಯರು ಗಾಯಗೊಳ್ಳುವಂತಾಯಿತು. ಉಪ್ಪಿನಂಗಡಿ ಹಾಗೂ ಆಲಂಕಾರು ಆರೋಗ್ಯ ಕವಚ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತವಾದ ತಕ್ಷಣ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸುಮಾರು ನೂರು ಮೀಟರ್ ದೂರದಲ್ಲಿ ನಿಂತುಕೊಂಡಿದ್ದ. ಇದನ್ನು ಗಮನಿಸಿದ ಸ್ಥಳೀಯರು ಅವನನ್ನು ಪ್ರಶ್ನಿಸಿದಾಗ ತಾನು ಚಾಲಕನಲ್ಲ. ತನ್ನ ಹೆಸರು ಚಂದ್ರ ಎಂಬುದಾಗಿದ್ದು, ತಾನು ಹೊಳೆನರಸೀಪುರದವ. ಮಂಗಳೂರಿಗೆ ಹೋಗಲು ಈ ಟಿಪ್ಪರ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಇದರ ಚಾಲಕ ಓಡಿ ಹೋಗಿದ್ದಾನೆ ಎಂದು ತಿಳಿಸಿದ್ದ. ಬಳಿಕ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರಲ್ಲಿ ಸ್ಥಳೀಯರು ಈತನ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಈತನನ್ನು ಪೊಲೀಸರು ಪರಿಶೀಲಿಸಿದರು. ಆಗ ಈತನ ಬಳಿ ಲಿಂಗರಾಜು ಎಂಬಾತನ ಚಾಲನ ಪರವಾನಿಗೆಯಲ್ಲಿ ಈತನ ಪೋಟೋ ಅಂಟಿಸಿದ್ದ ನಕಲಿ ಡಿಎಲ್ ದೊರೆತಿದೆ. ಈ ನಕಲಿ ಚಾಲನ ಪರವಾನಿಗೆಯನ್ನಿಟ್ಟುಕೊಂಡು ಈತ ಟಿಪ್ಪರ್ ಚಲಾಯಿಸಿದ್ದು, ಈ ಸಂದರ್ಭ ಬೆಳಕಿಗೆ ಬಂದಿದೆ.