×
Ad

ಸದಸ್ಯ ರಾಷ್ಟ್ರಗಳಲ್ಲಿ ಭಿನ್ನಮತ: ಚೀನಾ

Update: 2016-06-12 22:57 IST

ಬೀಜಿಂಗ್,ಜೂ.12: ಅಣುಶಕ್ತಿ ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಭಾರತದ ಸೇರ್ಪಡೆಗೆ ಅಮೆರಿಕದ ಪ್ರಬಲ ಬೆಂಬಲದ ಹೊರತಾಗಿಯೂ, ಚೀನಾವು ತನ್ನ ವಿರೋಧವನ್ನು ಮುಂದುವರಿಸಿದೆ. ಅಣುಶಕ್ತಿ ಪ್ರಸರಣ ಒಪ್ಪಂದ (ಎನ್‌ಪಿಟಿ)ಕ್ಕೆ ಸಹಿಹಾಕದ ರಾಷ್ಟ್ರಗಳನ್ನು ಸೇರ್ಪಡೆಗೊಳಿಸುವ ವಿಷಯದಲ್ಲಿ ಎನ್‌ಎಸ್‌ಜಿಯ ಸದಸ್ಯ ರಾಷ್ಟ್ರಗಳಲ್ಲಿ ಭಿನ್ನಮತವಿದೆ ಎಂದು ಅದು ಹೇಳಿದೆ. ವಿಯೆನ್ನಾದಲ್ಲಿ ಜೂನ್ 9ರಂದು ನಡೆದ ಎನ್‌ಎಸ್‌ಜಿ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ, ಭಾರತ ಮತ್ತಿತರ ರಾಷ್ಟ್ರಗಳನ್ನು ಸೇರ್ಪಡೆಗೊಳಿಸುವ ವಿಷಯದಲ್ಲಿ ಚರ್ಚೆ ನಡೆದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
 
 ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿಹಾಕದ ಭಾರತ ಮತ್ತಿತರ ರಾಷ್ಟ್ರಳನ್ನು ಸೇರ್ಪಡೆಗೊಳಿಸುವ ಬಗ್ಗೆ ವಿಯೆನ್ನಾದಲ್ಲಿ ನಡೆದ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲವೆಂದು ವಿದೇಶಾಂಗ ಇಲಾಖೆಯ ವಕ್ತಾರ ಹೊಂಗ್ ಲೀ ತಿಳಿಸಿದ್ದಾರೆ. ಜೂನ್ 9ರಂದು 48 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಎನ್‌ಎಸ್‌ಜಿಯ ಅಧ್ಯಕ್ಷತೆವಹಿಸಿರುವ ಅರ್ಜೆಂಟೀನಾದ ರಾಯಭಾರಿ ಮಾರಿಯಾನೊ ಗ್ರೊಸಿ ಅವರು ಜೂನ್ 9ರಂದು ಅನಧಿಕೃತವಾಗಿ ಸಭೆಯನ್ನು ನಡೆಸಿದ್ದರೆಂದು ಅವರು ಹೇಳಿದ್ದರು.
   ಆದಾಗ್ಯೂ, ವಿಯೆನ್ನಾದಲ್ಲಿನ ರಾಜತಾಂತ್ರಿಕ ಮೂಲಗಳು ಈ ಮೊದಲು ನೀಡಿದ ಹೇಳಿಕೆಯೊಂದರಲ್ಲಿ ಎನ್‌ಎಸ್‌ಜಿ ಸಭೆಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ಬಗ್ಗೆ ಚರ್ಚಿಸಲಾಗಿತ್ತಾದರೂ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲವೆಂದು ತಿಳಿಸಿದ್ದವು.
 ಅಣುಶಕ್ತಿ ಪ್ರಸರಣ ಒಪ್ಪಂದಕ್ಕೆ ಸಹಿಹಾಕದ ರಾಷ್ಟ್ರಗಳನ್ನು ಎನ್‌ಎಸ್‌ಜಿಗೆ ಸೇರ್ಪಡೆಗೊಳಿಸಕೂಡದೆಂದು ಚೀನಾ ಪ್ರತಿಪಾದಿಸುತ್ತಾ ಬಂದಿದೆ. ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕೆಂದು ಚೀನಾ ಆಗ್ರಹಿಸಿದೆ. ಈ ಕುರಿತ ಮಾತುಕತೆಯಲ್ಲಿ ತಾನು ರಚನಾತ್ಮಕವಾದ ರೀತಿಯಲ್ಲಿ ಪಾಲ್ಗೊಳ್ಳುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News