ಮಳೆಗೆ ಕೆಸರುಗದ್ದೆಯಾದ ಬ್ರಹ್ಮರಕೂಟ್ಲು ಸರ್ವಿಸ್ ರಸ್ತೆ

Update: 2016-06-12 18:28 GMT

ವಿಟ್ಲ, ಜೂ.12: ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಎಂಬಲ್ಲಿರುವ ಟೋಲ್ ಪ್ಲಾಝಾ ಬಳಿಯ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬಗೊಂಡ ಪರಿಣಾಮ ಮಳೆಯಿಂದಾಗಿ ಇದೀಗ ಇಲ್ಲಿನ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದೆ. ಇಲ್ಲಿನ ಸರ್ವಿಸ್ ರಸ್ತೆಯನ್ನು ಎತ್ತರಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆದಾರರ ಮೂಲಕ ಎರಡು ತಿಂಗಳ ಹಿಂದೆಯಷ್ಟೇ ಮಣ್ಣು ತುಂಬಿಸಿತ್ತು. ಆದರೆ ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮುಂಗಾರು ಪ್ರಾರಂಭಗೊಂಡಿದ್ದು, ಮೊದಲ ಮಳೆಗೇ ಈ ರಸ್ತೆ ಸಂಪೂರ್ಣ ಕೆಸರುಮಯಗೊಂಡು ನಡೆದಾಡಲೂ ಆಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಪರಿಸರದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆಯ ಕೆಸರಿನಿಂದಾಗಿ ನಡೆಯಲಾರದೆ ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ಕೆಸರಿನಿಂದ ಆವೃತವಾಗಿರುವ ಈ ರಸ್ತೆಯಲ್ಲಿ ಈ ಬಾರಿಯ ಮಳೆಗಾಲದಲ್ಲಿ ವಾಹನ ಸಂಚಾರವಂತೂ ಅಸಾಧ್ಯವಾಗಿದೆ ಎಂಬಂತಾಗಿದೆ. ಇಲ್ಲಿಗೆ ಸಮೀಪ ಒಂದಷ್ಟು ರಸ್ತೆಯನ್ನು ಮಾತ್ರ ಕಾಂಕ್ರಿಟೀಕರಣ ನಡೆಸಲಾಗಿದ್ದರೂ ಸಂಪೂರ್ಣ ರಸ್ತೆಯ ಅಭಿವೃದ್ಧಿ ಇನ್ನೂ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗೂ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News