ಕೇರಳದಲ್ಲಿ ಭಾರೀ ಮಳೆ: ಕುಸಿದ ಮನೆಗಳು, ಸಾವು-ನೋವು!
ತಿರುವನಂತಪುರಂ, ಜೂನ್ 13: ಕೇರಳದಾದ್ಯಂತ ಮಳೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದೆ. ಆದ್ದರಿಂದ ಹತ್ತು ಸಂತ್ರಸ್ತರ ನೆರವು ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 38 ಶಿಬಿರಗಳನ್ನು ಆರಂಭಿಸಿದೆ. ಕೊಲ್ಲಂ, ಆಲಪ್ಪುಝದಲ್ಲಿ ಒಬ್ಬರು ನಿಧನರಾದ ಸುದ್ದಿ ವರದಿಯಾಗಿದೆ. ಒಬ್ಬರು ಕಾಣೆಯಾಗಿದ್ದಾರೆ. ರವಿವಾರ ಎಪ್ಪತ್ತೈದು ಮನೆಗಳು ಕುಸಿದು ಬಿದ್ದಿವೆ. ಐದು ಮನೆಗಳು ಭಾಗಶಃ ಹಾನಿಗೀಡಾಗಿವೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ 30,ಕೊಲ್ಲಂನಲ್ಲಿ 24 ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ಣವಾಗಿ ಐದು ಮನೆಗಳು ಇಲ್ಲಿ ಕುಸಿದು ಬಿದ್ದಿವೆ. ಇದರಲ್ಲಿ ನಾಲ್ಕು ಮನೆಕೊಲ್ಲಂನಲ್ಲಿ ಧರಾಶಾಯಿಯಾಗಿದೆ.
ಶನಿವಾರಕೇರಳದಲ್ಲಿ ಮಳೆ ಕಾರಣದಿಂದಾಗಿ 203 ಮನೆಗಳು ಭಾಗಶಃ ಹಾಗೂ 20 ಮನೆಗಳು ಸಂಪೂರ್ಣ ಧರಾಶಾಯಿಯಾಗಿವೆ. ಭಾರೀ ಮಳೆಯೊಂದಿಗೆ ಗಾಳಿ ಕೂಡಾ ಬೀಸಿದ ಪರಿಣಾಮವಾಗಿ ಮನೆಯ ಛಾವಣಿಗಳು ಹಾರಿಹೋದ ಘಟನೆಗಳೂ ನಡೆದಿವೆ. ಅತೀ ಮಳೆಯಿಂದಾಗಿ ಕೇರಳದಲ್ಲಿ ಹಲವು ಕಡೆ ಕೃಷಿ ಬೆಳೆಗಳು ಕೊಚ್ಚಿ ಹೋಗಿವೆ. ನಷ್ಟವನ್ನು ಅಂದಾಜಿಸಿ ವರದಿ ಸಲ್ಲಿಸಬೇಕೆಂದು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸರಕಾರ ಆದೇಶ ಹೊರಡಿಸಿದೆ. ಕರುನಾಗಪಳ್ಳಿಯಲ್ಲಿ ಶನಿವಾರ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಗ್ರಹಿಣಿಯೊಬ್ಬರು ಮೃತರಾಗಿದ್ದಾರೆ. ಈರೀತಿ ಕೇರಳದಲ್ಲಿ ಮಳೆ ತನ್ನ ದಾಂಧಲೆಯನ್ನು ಆರಂಭಿಸಿದೆ.