ಸುರತ್ಕಲ್ ಟೋಲ್ ಗೇಟ್ ನಲ್ಲಿ ಗೂಂಡಾಗಿರಿ, ಬಸ್ ಚಾಲಕನಿಗೆ ಥಳಿತ
ಸುರತ್ಕಲ್, ಜೂ.13: ಉಡುಪಿ-ಮಂಗಳೂರು ಸಂಚರಿಸುವ ಬಸ್ ನ ಚಾಲಕನಿಗೆ ಟೋಲ್ ಗೇಟ್ ನ ಗೂಂಡಾಗಳು ಇಂದು ಹಲ್ಲೆ ನಡೆಸುವ ಮೂಲಕ ಮತ್ತೆ ಗೂಂಡಾಗಿರಿ ಮುಂದುವರಿಸಿದ್ದಾರೆ.
ಮಂಗಳೂರು - ಉಡುಪಿ ಸಂಚರಿಸುವ ಮಹೇಶ್ ಎಂಬ ಸರ್ವಿಸ್ ಬಸ್ ಚಾಲಕ ಹಿದಾಯತ್ ಎಂಬವರು ಟೋಲ್ ಗೇಟ್ ಸಿಬ್ಬಂದಿಯ ಗೂಂಡಾಗಿರಿಗೆ ಒಳಗಾಗಿ ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳ ಪಾಸ್ ಮಾಡದ ಬಸ್ ಸಿಬ್ಬಂದಿ ಟೋಲ್ ಗೇಟ್ ದಾಟುವಾಗ ಟೋಲ್ ಶುಲ್ಕ ನೀಡಿ ಸಂಚರಿಸುತ್ತಿದ್ದರು. ಅಂತೆಯೇ ಇಂದು ಕೂಡಾ ಟೋಲ್ ಗೇಟ್ ನ ಬಳಿ ಟೋಲ್ ಶುಲ್ಕ ಪಾವತಿಸಲು ಸರತಿ ಸಾಲಿನಲ್ಲಿ ಬಸ್ ನಿಂತ ಕಾರಣ ನಿರ್ವಾಹಕ ಕೃಷ್ಣ ಪ್ರಯಾಣಿಕರಿಂದ ಟಿಕೆಟ್ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ.
ಈ ವೇಳೆ ಟೋಲ್ ಶುಲ್ಕ ನೀಡಲು ತಡವಾಯಿತು ಎಂದು ಆರೋಪಿಸಿ ಟೋಲ್ ಗೇಟ್ ನ ಗೂಂಡಾಗಳು ಬಸ್ ಗೆ ಬಡಿಯಲಾರಂಭಿಸಿದಾಗ ಆಕ್ಷೇಪಿಸಿದ ಚಾಲಕ ಹಿದಾಯತ್ ಗೆ ಟೋಲ್ ಗೇಟ್ ಗೂಂಡಾಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.