ಸುಳ್ಯ: ಕೆಎಫ್‌ಡಿಸಿ ಕಾರ್ಮಿಕರ ಪ್ಯಾಕೇಜ್ ಕೆಲಸಕ್ಕೆ ವಿರೋಧ

Update: 2016-06-13 12:16 GMT

ಸುಳ್ಯ, ಜೂ.13: ಕೆಎಫ್‌ಡಿಸಿ ದಿನಗೂಲಿ ಹೆಚ್ಚಳ ಮಾಡಿ ನೌಕರರಿಗೆ ಪ್ಯಾಕೇಜ್ ನೀಡಿದ್ದು, ಇದರಿಂದ ಕೆಲಸದ ಒತ್ತಡ ಉಂಟಾಗಿದೆ. ಅಲ್ಲದೆ ಹೆಚ್ಚುವರಿ ಕೆಲಸ ಮಾಡದಿದ್ದರೆ ದಂಡ ವಿಧಿಸಲಾಗುತ್ತಿದೆ ಎಂದು ಜನರಲ್ ಎಂಪ್ಲಾಯಿಸ್ ಯೂನಿಯನ್ ದೂರಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಲೋಕನಾಥ್ ಕಲ್ಲುಗುಂಡಿ, ಕೆಎಫ್‌ಡಿಸಿಯ ರಬ್ಬರ್ ವಿಭಾಗದಲ್ಲಿ ಒಟ್ಟು 1,555 ಕಾರ್ಮಿಕರಿದ್ದು, 10 ಸಂಘಟನೆಗಳಿವೆ. ಹಲವು ಸಂಘಟನೆಗಳಿಗೆ ಸದಸ್ಯರೇ ಇಲ್ಲ. 8 ಸಂಘಟನೆಗಳು ಪ್ಯಾಕೇಜ್ ನೀತಿಗೆ ಸಹಿ ಮಾಡಿವೆ. ಜನರಲ್ ಎಂಪ್ಲಾಯಿಸ್ ಯೂನಿಯನ್ ಸೇರಿದಂತೆ 2 ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಪ್ಯಾಕೇಜ್ ಒಪ್ಪಂದ ಆಗುವ ಮೊದಲು 288 ರೂಪಾಯಿ ದಿನಗೂಲಿ ನೀಡಲಾಗುತ್ತಿತ್ತು. ಅಲ್ಲದೆ ಗೊಬ್ಬರ ಹಾಕುವುದಕ್ಕೆ, ಕಳೆ ಕೀಳುವುದಕ್ಕೆ ಹೆಚ್ಚುವರಿ ಕೂಲಿ ನೀಡಲಾಗುತ್ತಿತ್ತು.

ಹೆಚ್ಚು ಹಾಲು ಹಾಗೂ ಸ್ಕ್ರಾಪ್ ಸಂಗ್ರಹಕ್ಕೆ ಹೆಚ್ಚು ಕಮಿಶನ್ ಸಿಗುತಿತ್ತು. ಸರಾಸರಿ 380ರಷ್ಟು ದಿನಗೂಲಿ ಸಿಗುತ್ತಿತ್ತು. ಆದರೆ ಪ್ಯಾಕೇಜ್ ಬಂದ ಬಳಿಕ 442 ದಿನಗೂಲಿ ಸಿಗುತ್ತಿದ್ದು, ಟ್ಯಾಪಿಂಗ್, ಗೊಬ್ಬರ ಹಾಕುವುದು, ಕಳೆ ಕೀಳುವುದು ಅಲ್ಲದೆ ಮರುನಾಟಿ ಕೆಲಸ ಎಲ್ಲವೂ ಮಾಡಬೇಕಿದೆ. ಇದನ್ನು ಮಾಡಲು 8 ಗಂಟೆ ದುಡಿದರೂ ಸಾಕಾಗುವುದಿಲ್ಲ. ಅಲ್ಲದೆ ಕೆಲಸ ಮಾಡದಿದ್ದರೆ ಶೇ.10ರಷ್ಟು ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.

ಹೊಸ ಒಪ್ಪಂದ ಜಾರಿಗೆ ಮುನ್ನ ಬೇರೆ ಬೇರೆ ಕೆಲಸ ಮಾಡಿದರೆ ಹೆಚ್ಚುವರಿ ದಿನಗೂಲಿ ಸಿಗುತ್ತಿತ್ತು. 440 ದಿನಗೂಲಿ ಪಡೆಯಲು ಅವಕಾಶವಿತ್ತು. ಆದರೆ ಈಗ ಎಷ್ಟೇ ಕೆಲಸ ಮಾಡಿದರೂ ವಾರ್ಷಿಕ 273 ದಿನಗಳಿಗೆ ಮಾತ್ರ ವೇತನ ನೀಡಲಾಗುತ್ತಿದೆ. ಇದರಿಂದ ಹೆಚ್ಚು ಕೆಲಸ ಮಾಡಿಯೂ ಕಡಿಮೆ ವೇತನ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮುರಳೀಧರ ಕಲ್ಲೆಂಬಿ ಹೇಳಿದರು.

ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಜನರಲ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಅರಣ್ಯ ಸಚಿವ ಬಿ.ರಮಾನಾಥ ರೈ ಅವರಲ್ಲಿಗೆ ನಿಯೋಗ ತೆರಳಿದ್ದು, ಮನವಿ ಮಾಡಲಾಗಿದೆ. ಈ ಕುರಿತು ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರೊಂದಿಗೆ ಮಾತುಕತೆಯ ವ್ಯವಸ್ಥೆ ಮಾಡುವ ಭರವಸೆ ದೊರೆತಿದೆ ಎಂದು ಅಧ್ಯಕ್ಷ ಕ್ರಿಸ್ತುನಾಥನ್ ಹೇಳಿದರು.

ಯೂನಿಯನ್‌ನ ವರ್ಕಿಂಗ್ ಪ್ರೆಸಿಡೆಂಟ್ ಷಣ್ಮುಗಂ ಕಲ್ಲುಗುಂಡಿ, ಸಂಘಟನಾ ಕಾರ್ಯದರ್ಶಿ ಮುರುಗಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News