ಸುಳ್ಯ: ಕೃಷಿ ಅಭಿಯಾನ ಆರಂಭ
ಸುಳ್ಯ, ಜೂ.13: ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಹೆಸರಿನಲ್ಲಿ ಕೃಷಿ ಅಭಿಯಾನ ಸುಳ್ಯದಲ್ಲಿ ಆರಂಭಗೊಂಡಿದ್ದು, ಜೂ.18ರವರೆಗೆ ತಾಲೂಕಿನ 27 ಗ್ರಾಮಗಳಿಗೆ ಸಂಚರಿಸಿ ಮಾಹಿತಿ ನೀಡಲಿದೆ.
ಸುಳ್ಯ ಎಪಿಎಂಸಿಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಿ, ಮಾಹಿತಿ ರಥಕ್ಕೆ ಚಾಲನೆ ನೀಡಿದರು. ಸರಕಾರದ ಆದಾಯದ ಶೇ.60ರಷ್ಟು ನೌಕರರರಿಗೆ ವೇತನ ನೀಡಲು ಬಳಕೆಯಾಗುತ್ತಿದೆ. ಹಾಗಿದ್ದೂ ಎಲ್ಲಾ ಇಲಾಖೆಗಳಲ್ಲಿ ಪ್ರಾಮಾಣಿಕ ನೌಕರರ ಸಂಖ್ಯೆ ಕಡಿಮೆ ಇದೆ. ಇದರಿಂದ ವಿವಿಧ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ. ಈ ಕುರಿತು ಸರಕಾರ ಗಮನ ಕೊಡಬೇಕಿದೆ ಎಂದ ಅವರು ರೈತರು ಆರ್ಥಿಕ ಬೆಳೆಗಳಿಗೆ ನೀಡುವ ಆಸಕ್ತಿಯನ್ನು ಆಹಾರ ಧಾನ್ಯಗಳ ಬೆಳೆಗಳಿಗೂ ನೀಡುವ ಅಗತ್ಯವಿದೆ ಎಂದರು.
ಮಣ್ಣು ಆರೋಗ್ಯ ಚೀಟಿಯನ್ನು ಶಾಸಕ ಅಂಗಾರ ವಿತರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಜಿಲ್ಲಾ ನಿರ್ದೇಶಕ ಎಚ್.ಕೆಂಪೇಗೌಡ, ಈ ವರ್ಷ ಕೃಷಿ ಯಂತ್ರಧಾರೆ ಯೋಜನೆಯಡಿ ಹೊಸದಾಗಿ ಜಿಲ್ಲೆಯಲ್ಲಿ 8 ಕೇಂದ್ರಗಳು ಆರಂಭವಾಗಲಿದ್ದು, ಸುಳ್ಯ ಹೋಬಳಿಗೂ ಒಂದು ಕೇಂದ್ರ ಮಂಜೂರಾಗಿದೆ ಎಂದರು.
ಕೃಷಿ ಇಲಾಖೆ ಹೊರತಂದು ಮಾಹಿತಿ ಪುಸ್ತಕವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಬಿಡುಗಡೆ ಮಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಎಸ್.ಎನ್.ಮನ್ಮಥ , ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ, ಕೆಪೆಕ್ ನಿರ್ದೇಕ ಪಿ.ಎ.ಮುಹಮ್ಮದ್, ಕೃಷಿಕ ಸಮಾಜದ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಕೆಡಿಪಿ ಸದಸ್ಯ ರಾಧಾಕೃಷ್ಣ ಪರಿವಾರಕಾನ ಅತಿಥಿಗಳಾಗಿದ್ದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ಡಿ.ಎಚ್.ಮಂಜುನಾಥ್, ವೇದಿಕೆಯಲ್ಲಿದ್ದರು. ಸಹಾಯಕ ಕೃಷಿ ನಿರ್ದೇಶಕ ಪಾಲಿಚಂದ್ರ ಸ್ವಾಗತಿಸಿದರು. ಕೆಂಪೇಗೌಡ ಕಾರ್ಯಕ್ರಮ ನಿರೂಪಿಸಿದರು.