ಇಬ್ಬರು ಪುರುಷರು ಚುಂಬಿಸುತ್ತಿದ್ದುದನ್ನು ನೋಡಿ ಆಕ್ರೋಶಗೊಂಡಿದ್ದ: ತಂದೆ
ನ್ಯೂಯಾರ್ಕ್, ಜೂ. 13: ಒರ್ಲಾಂಡೊದ ನೈಟ್‌ಕ್ಲಬ್‌ನಲ್ಲಿ ನರಮೇಧ ನಡೆಸಿದ ದುಷ್ಕರ್ಮಿ ಉಮರ್ ಮತೀನ್, ಇತ್ತೀಚೆಗೆ ಮಯಾಮಿಯಲ್ಲಿ ಇಬ್ಬರು ಪುರುಷರು ಪರಸ್ಪರ ಚುಂಬಿಸುತ್ತಿದ್ದುದನ್ನು ನೋಡಿ ಆಕ್ರೋಶಗೊಂಡಿದ್ದನು ಎನ್ನಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಹತ್ಯಾಕಾಂಡವನ್ನು ದೇಶಿ ಭಯೋತ್ಪಾದನೆ ಎಂಬುದಾಗಿ ಕಾನೂನು ಅನುಷ್ಠಾನ ಅಧಿಕಾರಿಗಳು ಈಗಾಗಲೇ ಬಣ್ಣಿಸಿದ್ದಾರೆ. ದಾಳಿ ಆರಂಭಿಸಿದ ಬಳಿಕ 911 ಸಂಖ್ಯೆಗೆ ಕರೆ ಮಾಡಿದ ಮತೀನ್, ಐಸಿಸ್ ಭಯೋತ್ಪಾದಕ ಸಂಘಟನೆಗೆ ತನ್ನ ನಿಷ್ಠೆಯನ್ನು ಘೋಷಿಸಿದ್ದನು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಆದಾಗ್ಯೂ, ತನ್ನ ಮಗನ ಕೃತ್ಯಕ್ಕೆ ತಂದೆ ಸಿದ್ದೀಕ್ ಮತೀನ್ ಬೇರೆಯದೇ ಆದ ಕಾರಣವನ್ನು ನೀಡುತ್ತಾರೆ.
‘‘ಇತ್ತೀಚೆಗೆ ಮಯಾಮಿಯಲ್ಲಿ ಇಬ್ಬರು ಪುರುಷರು ಪರಸ್ಪರ ಚುಂಬಿಸುತ್ತಿದ್ದುದನ್ನು ನನ್ನ ಮಗ ನೋಡಿದ್ದನು. ಹಾಗು ತನ್ನ ಮೂರು ವರ್ಷದ ಮಗನೂ ಅದನ್ನು ನೋಡಿದುದರಿಂದ ಆಕ್ರೋಶಗೊಂಡಿದ್ದನು’’ ಎಂದು ಸಿದ್ದೀಕ್ ಎನ್‌ಬಿಸಿ ನ್ಯೂಸ್‌ಗೆ ಹೇಳಿದರು.
ಹತ್ಯಾಕಾಂಡಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಿದ ಅವರು, ತನ್ನ ಮಗನ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿದರು.
ಒರ್ಲಾಂಡೊ ನೈಟ್ ಕ್ಲಬ್‌ನಲ್ಲಿ ಹತ್ಯಾಕಾಂಡ ನಡೆಸಿದ ಉಮರ್ ಮತೀನ್ ಹಿಂಸಾ ಮನೋಭಾವ ಹೊಂದಿದ್ದನು, ಮಾನಸಿಕವಾಗಿ ಅಸ್ಥಿರನಾಗಿದ್ದನು ಹಾಗೂ ತನಗೆ ಹೊಡೆಯುತ್ತಿದ್ದನು ಎಂದು ಆತನ ಮಾಜಿ ಪತ್ನಿ ಸಿಟೋರ ಯೂಸುಫಿ ಹೇಳಿದ್ದಾರೆ.
ಸುಮಾರು ಎಂಟು ವರ್ಷಗಳ ಹಿಂದೆ ತಾನು ಉಮರ್‌ನನ್ನು ಆನ್‌ಲೈನ್‌ನಲ್ಲಿ ಭೇಟಿಯಾದೆ ಹಾಗೂ ಬಳಿಕ ಫ್ಲೋರಿಡಕ್ಕೆ ಹೋಗಿ ಆತನನ್ನು ಮದುವೆಯಾಗಲು ನಿರ್ಧರಿಸಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ತಮ್ಮ ದಾಂಪತ್ಯ ಚೆನ್ನಾಗಿತ್ತು ಎಂದು ಹೇಳಿದ ಮಾಜಿ ಪತ್ನಿ, ಆದರೆ, ಬಳಿಕ ಆತ ನಿಂದಿಸಲು ಆರಂಭಿಸಿದನು ಎಂದರು.
‘‘ಆತ ನನ್ನನ್ನು ಹೊಡೆಯುತ್ತಿದ್ದನು. ಮನೆಗೆ ಬಂದ ಕೂಡಲೇ, ಬಟ್ಟೆ ಒಣಗಿಲ್ಲ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ಆತ ನನಗೆ ಹೊಡೆಯುತ್ತಿದ್ದನು’’ ಎಂದರು.
ಹೊಣೆ ಹೊತ್ತುಕೊಂಡ ಐಸಿಸ್
ಬೆರೂತ್ (ಲೆಬನಾನ್), ಜೂ. 13: ಒರ್ಲಾಂಡೊ ಹತ್ಯಾಕಾಂಡದ ಹೊಣೆಯನ್ನು ಐಸಿಸ್ ಸೋಮವಾರ ಹೊತ್ತುಕೊಂಡಿದೆ.
‘‘ಅಮೆರಿಕದ ಖಲೀಫಶಾಹಿಯಲ್ಲಿರುವ ನಮ್ಮ ಸೈನಿಕ ಉಮರ್ ಮತೀನ್‌ಗೆ ಫ್ಲೋರಿಡದ ಒರ್ಲಾಂಡೊದಲ್ಲಿರುವ ನೈಟ್‌ಕ್ಲಬ್ ಪ್ರವೇಶಿಸಿ ದಾಳಿ ನಡೆಸಲು ದೇವರು ಅನುಮತಿ ನೀಡಿದರು. ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಸಾವು-ನೋವಿಗೊಳಗಾಗಿದ್ದಾರೆ’’ ಎಂದು ಅಲ್-ಬಯಾನ್ ರೇಡಿಯೊದಲ್ಲಿ ಪ್ರಸಾರಗೊಂಡ ಸುದ್ದಿ ತಿಳಿಸಿದೆ.