ಒರ್ಲಾಂಡೊ ದಾಳಿ ಭಯೋತ್ಪಾದನೆ ಕೃತ್ಯ ಶತ್ರು ವಿರುದ್ಧ ಅಮೆರಿಕನ್ನರು ಜೊತೆಯಾಗಿ ನಿಲ್ಲುತ್ತಾರೆ: ಒಬಾಮ
ವಾಶಿಂಗ್ಟನ್, ಜೂ. 13: ಒರ್ಲಾಂಡೊದಲ್ಲಿ ಶನಿವಾರ ಮುಂಜಾನೆ ನಡೆದ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಬರ್ಬರ ಹತ್ಯಾಕಾಂಡವನ್ನು, ‘‘ಭಯೋತ್ಪಾದನೆ ಮತ್ತು ದ್ವೇಷದ ಕೃತ್ಯ’’ ಎಂಬುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ರವಿವಾರ ಬಣ್ಣಿಸಿದ್ದಾರೆ.
ಫ್ಲೋರಿಡ ರಾಜ್ಯದ ಒರ್ಲಾಂಡೊದ ಕಿಕ್ಕಿರಿದ ಸಲಿಂಗಿಗಳ ನೈಟ್‌ಕ್ಲಬ್ ಒಂದರಲ್ಲಿ ನಡೆದ ಹತ್ಯಾಕಾಂಡ ಸರ್ವ ಅಮೆರಿಕನ್ನರ ಮೇಲೆ ನಡೆದ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ.
ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
‘‘ಡಝ್‌ನಗಟ್ಟಳೆ ಅಮಾಯಕ ಜನರ ಭಯಾನಕ ಹತ್ಯಾಕಾಂಡಕ್ಕೆ ಅಮೆರಿಕನ್ನರು ಇಂದು ಕಣ್ಣೀರು ಸುರಿಸುತ್ತಿದ್ದಾರೆ’’ ಎಂದು ಶ್ವೇತಭವನದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಅವರು ಹೇಳಿದ್ದಾರೆ.
‘‘ತನಿಖೆ ಈಗ ಆರಂಭಿಕ ಹಂತದಲ್ಲಷ್ಟೇ ಇದೆಯಾದರೂ, ಇದು ಭಯೋತ್ಪಾದನೆ ಹಾಗೂ ದ್ವೇಷ ಸಾಧನೆಯ ಕೃತ್ಯವಾಗಿದೆ ಎಂಬುದನ್ನು ಧಾರಾಳವಾಗಿ ಹೇಳಬಹುದಾಗಿದೆ’’ ಎಂದು ಒಬಾಮ ನುಡಿದರು.
‘‘ನಾವು ಹೆದರಿಕೆಗೆ ಅವಕಾಶ ಕೊಡುವುದಿಲ್ಲ ಅಥವಾ ಒಬ್ಬರ ವಿರುದ್ಧ ಇನ್ನೊಬ್ಬರು ಆಕ್ರಮಣ ನಡೆಸುವುದಿಲ್ಲ. ಬದಲಿಗೆ, ನಮ್ಮ ಜನರನ್ನು ರಕ್ಷಿಸಲು ಹಾಗೂ ನಮ್ಮ ದೇಶವನ್ನು ಕಾಪಾಡಲು ಹಾಗೂ ನಮಗೆ ಬೆದರಿಕೆ ಒಡ್ಡುವವರ ವಿರುದ್ಧ ಹೋರಾಡಲು ಅಮೆರಿಕನ್ನರಾಗಿ ನಾವು ಜೊತೆಯಾಗಿ ನಿಲ್ಲುತ್ತೇವೆ’’ ಎಂದರು.
ಹತ್ಯಾಕಾಂಡದಲ್ಲಿ ಮೃತಪಟ್ಟವರ ಗೌರವಾರ್ಥ ಶ್ವೇತಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಅವರು ಆದೇಶ ನೀಡಿದರು.
ಬಂದೂಕುಧಾರಿ ದುಷ್ಕರ್ಮಿ ಅಫ್ಘಾನಿಸ್ತಾನ ಮೂಲದ ಫ್ಲೋರಿಡ ನಿವಾಸಿ ಉಮರ್ ಎಸ್ ಮತೀನ್‌ನನ್ನು ಬಳಿಕ ಪೊಲೀಸರು ನೈಟ್‌ಕ್ಲಬ್‌ನಲ್ಲೇ ಗುಂಡಿಟ್ಟು ಕೊಂದರು.