×
Ad

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ದಾಖಲೆಯ 23.75 ಕೋ.ರೂ. ಲಾಭ: ಡಾ.ಎಂ.ಎನ್.ರಾಜೇಂದ್ರ ಕುಮಾರ್

Update: 2016-06-13 21:35 IST

ಮಂಗಳೂರು,ಜೂ.13:ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ತನ್ನ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) 2016ರ ಮಾರ್ಚ್ ಅಂತ್ಯದಲ್ಲಿ 23.75 ಕೋ.ರೂ. ಲಾಭ ಗಳಿಸಿದೆ. ಇದು ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಯೂ ಬ್ಯಾಂಕ್ ಗರಿಷ್ಠ ಲಾಭ ಗಳಿಸಿ ಸಾಧನೆಯ ಪಥದಲ್ಲಿದೆ. 102 ವರ್ಷಗಳ ಮುನ್ನಡೆಯೊಂದಿಗೆ ಬ್ಯಾಂಕ್ ವರದಿ ವರ್ಷದಲ್ಲಿ ವ್ಯವಹಾರದ ಗುರಿ 5,300 ಕೋ.ರೂ.ಗಳನ್ನು ದಾಟಿ 5,548.58 ಕೋ.ರೂ. ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ಪ್ರಸಕ್ತ ವರ್ಷ 6,300 ಕೋ.ರೂ. ವ್ಯವಹಾರದ ಗುರಿ ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಬ್ಯಾಂಕ್ ತನ್ನ 101 ಶಾಖೆಗಳ ಮುಖಾಂತರ 2015-16 ಸಾಲಿನಲ್ಲಿ 3,099.11 ಕೋ.ರೂ. ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಕೀರ್ತಿಗೂ ಪಾತ್ರವಾಗಿದೆ ಎಂದರು.

ಕಳೆದ ಸಾಲಿಗಿಂತ ಶೇ. 20.64ರಷ್ಟು ಹೆಚ್ಚಳವಾಗಿದೆ. ಸ್ಪರ್ಧಾತ್ಮಕ ಆರ್ಥಿಕ ಹಿನ್ನ್ನೆಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ 2,790.16 ಕೋ.ರೂ. ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 833.03 ಕೋ.ರೂ., ಮಧ್ಯಾವಧಿ ಸಾಲ 78.47 ಕೋ.ರೂ. ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು 911.50 ಕೋ. ರೂ. ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ 2,449.47 ಕೋ.ರೂ. ಆಗಿರುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ನೀಡಿದ ಎಲ್ಲ ಕೃಷಿ ಸಾಲಗಳು ಶೇ.100ರ ವಸೂಲಾತಿಯನ್ನು ಕಂಡಿದೆ. ಈ ಸಾಧನೆಯನ್ನು 21 ವರ್ಷಗಳಿಂದ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ ಎಂದರು.

2015ರ ಮಾರ್ಚ್ ಅಂತ್ಯಕ್ಕೆ ಅವಿಭಜಿತ ದ.ಕ. ಜಿಲ್ಲೆಯ 33 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇ.100ರ ಸಾಧನೆಗೈದಿವೆ. ಈ ಬ್ಯಾಂಕ್‌ಗೆ 918 ಸಂಘಗಳು ಸದಸ್ಯರಾಗಿದ್ದು, ಪಾಲು ಬಂಡವಾಳ 164.68 ಕೋ.ರೂ. ಆಗಿದ್ದು, ಕಳೆದ ವರ್ಷ 73.98 ಕೋ.ರೂ. ಆಗಿತ್ತು. ದುಡಿಯುವ ಬಂಡವಾಳ 4136.18 ಕೋ.ರೂ.ಆಗಿದ್ದು, ಇದು ಕಳೆದ ವರ್ಷಕ್ಕಿಂತ (3561.78 ಕೋ.ರೂ.) ಶೇ. 16.13 ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ 100.71 ಕೋ.ರೂ. ವಿವಿಧ ನಿಧಿಗಳನ್ನು ಹೊಂದಿರುತ್ತದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರುಪೇ (ಖಚಿಥಿ) ಕಿಸಾನ್ ಕ್ರೆಡಿಟ್ ಕಾರ್ಡ್‌ನ್ನು ನೀಡಿದ್ದು, ಈಗಾಗಲೇ 55,440 ರುಪೇ ಕಿಸಾನ್ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ. 25,651 ರುಪೇ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

ಬ್ಯಾಂಕ್‌ಗೆ 17 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 16 ಬಾರಿ ನಬಾರ್ಡ್ ಪ್ರಶಸ್ತಿ

ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ಈ ಬ್ಯಾಂಕ್‌ಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಲಭಿಸಿದೆ. ಬ್ಯಾಂಕ್ 42,536 ಗುಂಪುಗಳನ್ನು ಹೊಂದಿದೆ. ಜಿಲ್ಲೆಯಲ್ಲಿ 1,01,106 ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗಿದೆ. 77,674 ಕಿಸಾನ್ ಕ್ರೆಡಿಟ್ ಕಾರ್ಡುದಾರರಿಗೆ ವೈಯುಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ. ಮೊಬೈಲ್ ಬ್ಯಾಂಕಿಂಗ್‌ನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಇದೆ. ಬ್ಯಾಂಕ್‌ನ ಎಲ್ಲ ಶಾಖೆಗಳ ಭದ್ರತೆಯ ಹಿತದೃಷ್ಠಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಗೆ ಪಿಂಚಣೆ ಯೋಜನೆ ರೂಪಿಸಲಾಗಿದೆ. ರುಪೇ ಕಿಸಾನ್ ಚಿಪ್ ಕಾರ್ಡ್ ವಿತರಿಸಿದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ 9,331 ಚಿಪ್ ಕಾರ್ಡ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ ಎಂದು ಹೇಳಿದರು.

 ಕಿಯೋಸ್ಕ್ ಯಂತ್ರ ಅಳವಡಿಕೆ:

ಕೇಂದ್ರ ಶಾಖೆ ಕೊಡಿಯಾಲ್‌ಬೈಲ್‌ನಲ್ಲಿ ಗ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಕ್ಯಾಷ್ ಡೆಪಾಜಿಟ್ ಹಾಗೂ ಚೆಕ್ ಡೆಪಾಜಿಟ್ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಗ್ರಾಹಕರು ಹಣ ಪಾವತಿಸಿ ಹಾಗೂ ಚೆಕ್ ಡೆಪಾಜಿಟ್ ಮಾಡುವ ಸಮಯವನ್ನು ಉಳಿಸಿಕೊಳ್ಳಬಹುದು. ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸದಸ್ಯರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ವಿಶೇಷ ಅನುಭವ ನೀಡಲು ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸುಸಜ್ಜಿತ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಮುಂದಿನ ಯೋಜನೆಗಳು

ಇಂಟರ್ ಬ್ಯಾಂಕಿಂಗ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆಯಿಂದ ಮೊಬೈಲ್ ಮೂಲಕ ಗ್ರಾಹಕರ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಅದೇ ಬ್ಯಾಂಕ್‌ನಿಂದ ಮತ್ತು ಇತರ ಬ್ಯಾಂಕ್‌ನ ಖಾತೆಗೆ ಹಣ ವರ್ಗಾಯಿಸಬಹುದು. ಈ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ತಾಲೂಕು ಕೇಂದ್ರಗಳಲ್ಲಿ ಎಟಿಎಂ ಅಳವಡಿಕೆ ಮಾಡಲಾಗುವುದು. ಈ ಎಟಿಎಂನಲ್ಲಿ ಯಾವುದೇ ಬ್ಯಾಂಕ್‌ನ ಎಟಿಎಂ ಕಾರ್ಡ್‌ಗಳನ್ನು ಉಪಯೋಗಿಸಿ ಹಣ ಪಡೆಯಬಹುದು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ವಿನಯ ಕುಮಾರ್ ಸೂರಿಂಜೆ, ಬಿ.ನಿರಂಜನ್,ಟಿ.ಜಿ.ರಾಜಾರಾಮ್ ಭಟ್, ಎಂ.ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಕೆ.ಎಸ್. ದೇವರಾಜ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಬಿ.ಜಯರಾಮ್ ರೈ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ವಿಶ್ವನಾಥ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News