ಮುಡಿಪು: ಅರ್ಕಾಣ-ಕಂಬಳಪದವು ಚತುಷ್ಪಥ ರಸ್ತೆಗೆ ಶಿಲಾನ್ಯಾಸ
ಕೊಣಾಜೆ, ಜೂ.13: ರಾಜ್ಯ ಸರಕಾರದ ಅನುದಾನದಿಂದ ಮಾಣಿ-ಉಳ್ಳಾಲ ಮುಖ್ಯ ರಸ್ತೆಯ ಅಗಲೀಕರಣದ ಎರಡು ಹಂತದ ಕಾಮಗಾರಿಗಳು ಮುಗಿದಿದ್ದು, ಇದೀಗ ಇನ್ಫೊಸಿಸ್ ಕಂಪೆನಿಯು ಅರ್ಕಾಣ ಜಂಕ್ಷನ್‌ನಿಂದ ಕಂಬಳಪದವಿನವರೆಗಿನ 1ಕಿ.ಮೀ ರಸ್ತೆಯನ್ನು ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ಮಾದರಿ ರಸ್ತೆಯನ್ನಾಗಿ ರೂಪಿಸಲಿದ್ದು, ಕಾಮಗಾರಿಗೆ ಸಚಿವ ಯು.ಟಿ ಖಾದರ್ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ರಾಜ್ಯ ಸರಕಾರದ 14 ಕೋಟಿ ರೂ.ಅನುದಾನದಿಂದ ತೊಕೊಟ್ಟು, ಕೊಣಾಜೆ, ಮುಡಿಪು, ಮೆಲ್ಕಾರ್ ಸಂಪರ್ಕದ ಉಳ್ಳಾಲ-ಮಾಣಿ ರಸ್ತೆಯ ಅಗಲೀಕರಣದ ಎರಡು ಹಂತದ ಕಾಮಗಾರಿಯು ಈಗಾಗಲೇ ಮುಗಿದಿದ್ದು, ಮೂರನೆ ಹಂತದ ಕಾಮಗಾರಿಗೆ ಕಾಯಕಲ್ಪದೊರೆತಿದೆ. ಮುಡಿಪುವಿನ ಕಂಬಳಪದವಿನಲ್ಲಿ ಕಾರ್ಯಾಚರಿಸುತ್ತಿರುವ ಇನ್ಫೊಸಿಸ್ ಶಾಖೆಯ ಎದುರಿನಿಂದ ಹಾದು ಹೋಗುವ ಅರ್ಕಾಣ-ಕಂಬಳಪದವು ರಸ್ತೆಯನ್ನು ಉತ್ಕೃಷ್ಟ ಗುಣಮಟ್ಟದಿಂದ ಚತುಷ್ಪಥಗೊಳಿಸಲು ಇನ್ಫೊಸಿಸ್ ಕಂಪೆನಿಯು 8 ಕೋಟಿ ರೂ. ದೇಣಿಗೆ ನೀಡಿ ಅಭಿವೃದ್ಧಿಗೆ ಸರಕಾರದೊಂದಿಗೆ ಕೈಜೋಡಿಸಿದೆ.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ಖಾದರ್, ಅಭಿವೃದ್ಧಿ ಕಾರ್ಯಗಳಲ್ಲಿ ಸರಕಾರದೊಂದಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಮಾಣಿ-ಉಳ್ಳಾಲ ರಸ್ತೆಯನ್ನು ಚತುಷ್ಪಥಗೊಳಿಸಲು ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದು ಯೋಜನೆಯು ಪ್ರಗತಿಯಲ್ಲಿದೆ. ಅಲ್ಲಿಯವರೆಗೆ ಸುಗಮಸಂಚಾರಕ್ಕೆ ರಾಜ್ಯ ಸರಕಾರದ ಅನುದಾನದಿಂದ ರಸ್ತೆ ಅಗಲೀಕರಣ ನಡೆಸಲಾಗುತ್ತಿದೆ. ಕೇಂದ್ರ ಸರಕಾರದ ಚತುಷ್ಪಥ ಕಾಮಗಾರಿ ಯೋಜನೆಗೆ ಇನ್ಫೋಸಿಸ್‌ನಿಂದ ನಿರ್ಮಾಣಗೊಳ್ಳುತ್ತಿರುವ 1ಕಿ.ಮೀ ಚತುಷ್ಪಥ ರಸ್ತೆಯೇ ಆರಂಭಿಕ ಅಡಿಪಾಯವಾಗಲಿದೆ. ಅಡ್ಯಾರ್-ಹರೇಕಳ ಸಂಪರ್ಕದ ಸೇತುವೆ ನಿರ್ಮಾಣಕ್ಕೂ ಸಿಆರ್‌ಎಫ್ ನಿಧಿಯಿಂದ 80 ಕೋಟಿ ರೂಪಾಯಿ ಅನುದಾನ ಮಂಜೂರಾತಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇನ್ಫೊಸಿಸ್ ಅಧಿಕಾರಿ ಗೋಪಿ ಕೆ.ಕೆ ಮಾತನಾಡಿ, ಮುಡಿಪುವಿನಲ್ಲಿರುವ ತಮ್ಮ ಕಂಪೆನಿಯ ಶಾಖೆಗೆ ಇದೇ ಮಾರ್ಗವಾಗಿ ಅನೇಕ ಉದ್ಯೋಗಿಗಳು ಪ್ರಯಾಣಿಸುತ್ತಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕಿಂಚಿತ್ತು ಸಹಾಯ ನೀಡುವುದು ನಮ್ಮದೂ ಜವಾಬ್ದಾರಿಯಾಗಿದೆ. ಇದರ ಜೊತೆಗೆ ಸ್ಥಳೀಯ ಸಂಸ್ಥೆ ಮತ್ತು ಮಕ್ಕಳ ಕೌಶಲ್ಯಾಭಿವೃದ್ಧಿಗೆ ಸಹಾಯ ನೀಡಲೆಂದೇ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಸದಸ್ಯರಾದ ಹೈದರ್ ಕೈರಂಗಳ, ಪಜೀರು ಗ್ರಾ.ಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಮುಖಂಡರಾದ ರಝಾಕ್ ಕುಕ್ಕಾಜೆ, ಕೊಣಾಜೆ ಗ್ರಾ.ಪಂ.ಅಧ್ಯಕ್ಷ ಶೌಕತ್ ಆಲಿ, ಸಂತೋಷ್ ಶೆಟ್ಟಿ, ಪ್ರಶಾಂತ್ ಕಾಜವ, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಇರಾ ಗ್ರಾ.ಪಂ.ಅಧ್ಯಕ್ಷ ರಝಾಕ್ ಕುಕ್ಕಾಜೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ಪದನಾಭ ನರಿಂಗಾನ, ನಾಸಿರ್ ನಡುಪದವು, ನಝರ್ ಷಾ, ಸಮೀರ್, ಉಮ್ಮರ್ ಪಜೀರು ಮೊದಲಾದವರು ಉಪಸ್ಥಿತರಿದ್ದರು.