ಜೆಇಇಯಲ್ಲಿ ಅಗ್ರಸ್ಥಾನ ಗಳಿಸಿದ ಮೂಡುಬಿದಿರೆಯ ಕೆನ್ರಿಕ್‌ಗೆ ಸಂಶೋಧನೆಯತ್ತ ಒಲವು

Update: 2016-06-13 16:41 GMT

ಮಂಗಳೂರು , ಜೂ.13: ಪ್ರತಿಷ್ಠಿತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ದಾಖಲಾತಿಗಾಗಿ ನಡೆಯುವ ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯಲ್ಲಿ ದೇಶಕ್ಕೇ 203ನೆ ರ್ಯಾಂಕ್ ಪಡೆದು ಸಾಧನೆ ಮಾಡಿರುವ ಮೂಡುಬಿದಿರೆಯ ಕೆನ್ರಿಕ್ ಝೇವಿಯರ್ ಪಿಂಟೊ ಗಣಿತ ಅಥವಾ ಭೌತಶಾಸ್ತ್ರ ದಲ್ಲಿ ಸಂಶೋಧಕನಾಗುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ.

ಮಗನ ಬಯಕೆಗೆ ಪೋಷಕರ ಬೆಂಬಲ

‘‘ಸಾಮಾನ್ಯವಾಗಿ ಜೆಇಇಯಲ್ಲಿ ಸಾಧನೆ ಮಾಡಿದ ಹುಡುಗರು ಐಐಟಿಯಲ್ಲಿ ಶಿಕ್ಷಣ ಪಡೆದು ಬಳಿಕ ತಾಂತ್ರಿಕ ಕ್ಷೇತ್ರದಲ್ಲಿ ದೊಡ್ಡ ಸಂಬಳ ಪಡೆಯುವ ಉದ್ಯೋಗದಲ್ಲಿ ಮುಂದುವರಿಯುತ್ತಾರೆ.ನಾವು ಅದೇ ರೀತಿ ಇಚ್ಛೆಯನ್ನು ವ್ಯಕ್ತ ಪಡಿಸಿದ್ದೆವು ಆದರೆ ನಮ್ಮ ಮಗ ನನಗೆ ಗಣಿತ ಅಥವಾ ಭೌತವಿಜ್ಞಾನದಲ್ಲಿ ಸಂಶೋಧಕನಾಗ ಬೇಕು ಎನ್ನುವ ಆಸಕ್ತಿ ಇದೆ ಎಂದ. ಆತನ ಇಚ್ಛೆಯನ್ನು ನಾವು ಕಡೆಗಣಿಸಿಲ್ಲ.ಆ ನಿರ್ಧಾರದ ಬಗ್ಗೆ ನಮಗೆ ಬೇಸರವಾಗಿಲ್ಲ.ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಇಂಜಿನಿಯರ್‌ಗಳು. ನಾನು ಕಳೆದ 30ವರ್ಷಗಳಿಂದ ಟೀಚಿಂಗ್ ಮಾಡ್ತಾ ಇದ್ದೇನೆ. ಅದು ನನ್ನ ಆಸಕ್ತಿಯ ಕ್ಷೇತ್ರ . ಅದೇ ರೀತಿ ನನ್ನ ಮಗನ ಆಸಕ್ತಿ ಏನಿದೆಯೋ ಆ ಕ್ಷೇತ್ರದಲ್ಲಿ ಆತ ಮುಂದುವರಿಯಬೇಕು ಎನ್ನುವುದು ನಮ್ಮ ನಿಲುವು.ಆ ಕ್ಷೇತ್ರದಲ್ಲಿ ಆತ ಸಾಧನೆ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಆತನಿಗೆ ಆಕ್ಷೇತ್ರದಲ್ಲಿ ತೃಪ್ತಿದೊರೆಯ ಬಹುದು. ಜೀವನದಲ್ಲಿ ಹಣಗಳಿಕೆಯೊಂದೆ ಮುಖ್ಯವಲ್ಲ’’ ಎಂದು ಕೆನ್ರಿಕ್ ಝೆವಿಯರ್ ಪಿಂಟೊ ಅವರ ತಂದೆ ಮೂಡಬಿದ್ರೆಯ ಎಸ್‌ಎನ್‌ಎಮ್ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಜೆ.ಜೆ.ಪಿಂಟೊ ತಿಳಿಸಿದ್ದಾರೆ.

ನಾವು ಮೂಡುಬಿದಿರೆಯಂತಹ ಹಳ್ಳಿಯ ಶಾಲೆಯಲ್ಲಿ ಕಲಿತವರು.ನಮ್ಮ ಮಗ ಕೆನ್ರಿಕ್ ಝೇವಿಯರ್ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಹುಡುಗ,ಬಳಿಕ ಮಂಗಳೂರಿನ ಲೂಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ 12ನೆ ತರಗತಿ ಪೂರ್ಣಗೊಳಿಸಿದ. ಅಲ್ಲಿ ನ ಸಿಎಫ್‌ಎಎಲ್ ಸಂಸ್ಥೆಯ ಮೂಲಕ ಜೆಇಇ ಪರೀಕ್ಷೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ತರಬೇತಿಯನ್ನು ಪಡೆದುಕೊಂಡ. ಅದೊಂದು ಆತನ ಬದುಕಿನ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಅಲ್ಲಿ ಬಹಳ ಪ್ರತಿಭಾವಂತರು ಬಂದು ಮಕ್ಕಳಿಗೆ ತರಬೇತಿ ನೀಡುತ್ತಾರೆ.

ಆತ ಜೆಇಇ ಪರೀಕ್ಷೆಯಲ್ಲಿ 203ನೆ ರ್ಯಾಂಕ್ ಪಡೆದುದಲ್ಲದೆ ಇತರ ಹಲವು ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಪ್ರತಿಭಾ ಪುರಸ್ಕಾರವನ್ನು ಪಡೆದಿದ್ದಾನೆ.ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಬೆಂಗಳೂರು,ಚೆನ್ನೈನ ಮ್ಯಾಥಮೆಟಿಕ್ ಇನ್‌ಸ್ಟಿಟ್ಯೂಟ್‌ನಲ್ಲೂ ದಾಖಲಾತಿಗೆ ಆಯ್ಕೆಯಾಗಿದ್ದಾನೆ. ಕೆನ್ರಿಕ್ 10ನೆ ತರಗತಿಯಲ್ಲಿರುವಾಗ ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಎರಡನೆ ಸ್ಥಾನ ಪಡೆದು 15 ಸಾವಿರ ರೂ. ಸ್ಕಾಲರ್ ಶಿಫ್ ಪಡೆದಿದ್ದಾನೆ. ಗಣಿತ, ವಿಜ್ಞಾನ, ಭೌತಸಾಸ್ತ್ರ, ರಸಾಯನಶಾಸ್ತ್ರ ಹಾಗೂ ಖಗೋಳಶಾಸ್ತ್ರ ವಿಷಯಗಳಲ್ಲಿ ನಡೆದ ಒಲಿಪಿಯಾಡ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ಕಿಶೋರ್ ವೈಜ್ಞಾನಿಕ ಪ್ರತಿಷ್ಠಾನ ಯೋಜನಾ ವತಿಯಿಂದ ಹಮ್ಮಿಕೊಂಡ ಸ್ಪರ್ಧೆಯಲ್ಲಿ 16ನೆ ರ್ಯಾಂಕ್‌ಗಳಿಸಿದ್ದಾನೆ. ನಮ್ಮ ಒತ್ತಾಯಕ್ಕೆ ಸಿಇಟಿ ಬರೆದು ಅಲ್ಲೂ 56ನೆ ರ್ಯಾಂಕ್‌ಗಳಿಸಿದ್ದಾನೆ. ನಮಗೆ ಇಬ್ಬರು ಮಕ್ಕಳು. ಇನ್ನೊಬ್ಬ ಈತನ ಅಣ್ಣ ಕೆನತ್ ಪಿಂಟೊ ವೆಲ್ಲೂರಿನ ವಿಐಟಿ ವಿಶ್ವ ವಿದ್ಯಾನಿಲಯದಲ್ಲಿ ಎರಡುವರ್ಷದ ಬಿಟೆಕ್ ಪದವಿಯ ಮೂರನೆ ವರ್ಷದಲ್ಲಿ ಓದುತ್ತಿದ್ದಾನೆ’’ಎಂದು ಜೆ.ಜೆ.ಪಿಂಟೊ ತಿಳಿಸಿದ್ದಾರೆ.

‘‘ನನಗೆ ಸಂಶೋಧನೆಯಲ್ಲಿ ಆಸಕ್ತಿ ಇದೆ. ಇಂಜಿನಿಯರಿಂಗ್ ಪದವಿಗಳಿಸಿದ ಬಳಿಕ ಅಥವಾ ಅದಕ್ಕಿಂತ ಮೊದಲು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎನ್ನುವ ಇಚ್ಛೆ ಇದೆ. ಯಾವ ಐಐಟಿಗೆ ಸೇರುವುದು ಎಂದು ಇನ್ನಷ್ಟೇ ನೋಡಬೇಕಾಗಿದೆ ’’ಎಂದು ಕೆನ್ರಿಕ್ ಝೇವಿಯರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News