×
Ad

‘ಬಹುತ್ವವನ್ನು ಮೆಚ್ಚಿಕೊಂಡ ಸಹಿಷ್ಣು ಕವಿ ಕಣವಿ’

Update: 2016-06-13 23:30 IST

ಮೂಡುಬಿದಿರೆ, ಜೂ.13: ನವೋದಯ ಕಾಲಘಟ್ಟದಲ್ಲಿ ಬರೆಯಲು ಪ್ರಾರಂಭಿಸಿದ ಚೆನ್ನವೀರ ಕಣವಿ ಅವರು ಆನಂದಕಂದ, ಮಧುರಚೆನ್ನ, ಬೇಂದ್ರೆ, ಜಿ.ಎಸ್.ಶಿವರುದ್ರಪ್ಪನವರ ಜೊತೆಗಿದ್ದುಕೊಂಡು ನವ್ಯ, ನವೋದಯ, ಪ್ರಗತಿಶೀಲ, ಆಧುನಿಕ ಸಾಹಿತ್ಯದ ಮನೋಧರ್ಮಕ್ಕೆ ಸ್ಪಂದಿಸಿಯೂ ಅವೆಲ್ಲವುಗಳಿಂದಲೂ ಹೊರಗೆ ನಿಂತು ತನ್ನದೇ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡು ಅರಳಿದ ಚೆಂಬೆಳಕಿನ ಕವಿಯಾಗಿದ್ದಾರೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಧಾರಾಣಿ ಹೇಳಿದರು.

ಅವರು ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಅವರು ‘ಡಾ. ಚೆನ್ನವೀರ ಕಣವಿ ಕಾವ್ಯದ ಮರುಓದು’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಬಂಡಾಯದ ನೆಲೆಯಲ್ಲಿಯೂ ಬರೆದ ಕಣವಿಯವರು ಯಾವ ಪರಂಪರೆಯ ಪದ್ಧತಿಗೂ ಅಂಟಿಕೊಳ್ಳದೆ ಬಹುತ್ವಗಳನ್ನು ತನ್ನಲ್ಲೇ ಗುರುತಿಸಿಕೊಂಡು ೂಮಿ ಆಕಾಶಗಳ ನಂಟನ್ನು ಕಳೆದುಕೊಳ್ಳದೆ ಮಾನವೀಯತೆಯ ನೆಲೆಯಲ್ಲಿಯೇ ದೇಸೀ ವೌಲ್ಯಗಳನ್ನು ಪ್ರೀತಿಸಿದವರು. ನವೋದಯ ಕವಿಗಳು ಕಂಡ ಆದರ್ಶ ಭಾರತದ ಭಾವತೀವ್ರತೆಯ ಕನಸುಗಳಲ್ಲಿ ತೇಲಿ ಹೋಗದೆ ಬದುಕಿ ಬಾಳಲು ಬೇಕಾದ ನೆಲದ ಪ್ರಜ್ಞೆಯನ್ನು ಗಮನದಲ್ಲಿಟ್ಟುಕೊಂಡು ವರ್ಗ ವರ್ಣಗಳ ಬೇಧವಿಲ್ಲದೆ ಮನುಷ್ಯನನ್ನು ಮನುಷ್ಯನನ್ನಾಗಿಯೇ ಕಾಣುವ ತುಡಿತ ಅವರ ಕವನಗಳಲ್ಲಿರುವ ವೈಶಿಷ್ಟ್ಯವಾಗಿದೆ.

ಮೃದು ವ್ಯಕ್ತಿತ್ವದ ದಾಕ್ಷಿಣ್ಯ ಸ್ವಬಾವದ ಬಹುತ್ವವನ್ನು ಮೆಚ್ಚಿಕೊಂಡ ಸಹಿಷ್ಣು ಕವಿಯಾಗಿ ಮತ್ತು ಇದಕ್ಕೂ ಮಿಗಿಲಾಗಿ ಬರೆದಂತೆ ಬದುಕಿದ ಮತ್ತು ಬದುಕಿದಂತೆ ಬರೆಯುವ ಕವಿಯಾಗಿಯೂ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದರು.

ಅತಿಥಿಗಳನ್ನು ಇದೇ ಸಂದಭರ್ದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಡಾ. ನಾ.ಮೊಗಸಾಲೆ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News