ಮುಝಫ್ಫರ್ ನಗರದಲ್ಲಿ ಮುಸ್ಲಿಮರನ್ನು ನಿರಾಶ್ರಿತ ಶಿಬಿರಗಳಿಗೆ ತಳ್ಳಿದಾಗ ಎಲ್ಲಿತ್ತು ಈ ಆಕ್ರೋಶ ?
ಹೊಸದಿಲ್ಲಿ, ಜೂ. 14: ಪಶ್ಚಿಮ ಉತ್ತರ ಪ್ರದೇಶದಲ್ಲಿರುವ ಒಂದು ಸಣ್ಣ ಗ್ರಾಮವಾದ ಕೈರಾನಾದಿಂದ ಹಿಂದೂಗಳು ವಲಸೆ ಹೋಗುತ್ತಿರುವ ವಿಚಾರ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸುದ್ದಿಯಾಗಿತ್ತು. ಇಲ್ಲಿ ಹಿಂದೂಗಳು ತೊಂದರೆ ಅನುಭವಿಸುತ್ತಿರುವುದರಿಂದ ‘ಹುಸಿ ಜಾತ್ಯತೀತ’ ಮಾಧ್ಯಮವು ಮೌನವಾಗಿದೆಯೆಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ. ಆದರೆ ಸತ್ಯ ಸರಳವಾಗಿಲ್ಲ, 2013ರ ಮುಝಫ್ಫರ್ನಗರ ದಂಗೆಗಳ ನಂತರ ಇಲ್ಲಿ ಮತೀಯ ವಿಭಜನೆ ಮತ್ತಷ್ಟು ಆಳವಾಗಿದೆ.
ಪ್ರತಿಯೊಂದು ಪ್ರದೇಶ ಕೂಡ ಧಾರ್ಮಿಕ ಆಧಾರದಲ್ಲಿ ವಿಭಜನೆಗೊಳ್ಳುತ್ತಿದೆ, ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ. ಕೈರಾನದಲ್ಲಿ ಕೂಡ ಸ್ಥಳೀಯ ಮುಸ್ಲಿಮ್ ಗ್ಯಾಂಗ್‌ಸ್ಟರ್ ಒಬ್ಬ ಜನರನ್ನು ಭಯಭೀತಗೊಳಿಸುತ್ತಿದ್ದು ಆತನ ಗ್ಯಾಂಗಿನಲ್ಲಿ ಹಿಂದೂಗಳು ಹಾಗೂ ಮುಸ್ಲಿಮರಿದ್ದಾರೆಂದು ಹೇಳುವ ಅವರು ಈಗ ಬಿಜೆಪಿ ಇಲ್ಲಿಗೆ ಸತ್ಯಶೋಧನಾ ತಂಡವೊಂದನ್ನು ಕಳುಹಿಸುತ್ತಿರುವುದನ್ನು ಉಲ್ಲೇಖಿಸಿ ಯಾರನ್ನೂ ಧರ್ಮದ ಆಧಾರದಲ್ಲಿ ತಾರತಮ್ಯ ದೃಷ್ಟಿಯಿಂದ ನೋಡಬಾರದು ಎನ್ನುತ್ತಾ ಎರಡು ಪ್ರಶ್ನೆಗಳನ್ನು ಮುಂದಿಡುತ್ತಾರೆ. ‘‘ಮುಝಫ್ಫರ್ನಗರ ದಂಗೆಗಳ ಬಳಿಕ ಮುಸ್ಲಿಮರನ್ನು ನಿರಾಶ್ರಿತರ ಶಿಬಿರಗಳಿಗೆ ದೂಡಿದಾಗ ಈ ಕನಿಕರವೆಲ್ಲಿತ್ತು ? ಮೇಲಾಗಿ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಿರುವಾಗ ಕೈರಾನಾ ಏಕೆ ಸುದ್ದಿಯಾಗುತ್ತಿದೆ?’’ ಎಂದೂ ರಾಜದೀಪ್ ಪ್ರಶ್ನಿಸಿದ್ದಾರೆ.
ಮತೀಯ ಆಧಾರದಲ್ಲಿ ಸಮಾಜ ವಿಭಜನೆಯಾದಾಗ ಯಾರು ಪ್ರಯೋಜನ ಪಡೆಯುತ್ತಾರೆಂಬುದನ್ನೂ ಜನ ಯೋಚಿಸಬೇಕಿದೆ ಎಂದು ರಾಜದೀಪ್ ಹೇಳುತ್ತಾರೆ.