ಪ್ರಧಾನಿ ಕಾಲಿಗೆ ಬಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ!
ಅಲಹಾಬಾದ್, ಜೂ.14: ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ರಾಜ್ಯದ ಮುಖ್ಯಮಂತ್ರಿಯ ಪಾದಸ್ಪರ್ಶ ಮಾಡಿದ್ದು, ನ್ಯಾಯಾಂಗ ವಲಯದಲ್ಲಿ ದಿಗ್ಭ್ರಮೆ ಹುಟ್ಟಿಸಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್‌ನಿಂದ ಸೃಷ್ಟಿಯಾಗಿರುವ ಈ ಸುದ್ದಿಯನ್ನು ನಂಬಬಹುದಾದರೆ, ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಈ ಪಾದಸ್ಪರ್ಶ ಸಂಪ್ರದಾಯ ಮುಂದುವರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಜೊತೆ ಚಹಾ ಸೇವನೆ ಮಾಡುವ ವೇಳೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಪ್ರಧಾನಿಯವರ ಕಾಲಿಗೆ ಬಿದ್ದರು ಎಂದು ಹೇಳಲಾಗಿದೆ.
ಮತ್ತೊಬ್ಬ ಹಿರಿಯ ನ್ಯಾಯಮೂರ್ತಿಗಳು, ಪ್ರಧಾನಿಯನ್ನು ಮ್ಯಾನ್ ಆಫ್ ದ ಮೊಮೆಂಟ್ ಎಂದು ಬಣ್ಣಿಸಿದರು. ಪ್ರಧಾನಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ದೊಡ್ಡ ಪೈಪೋಟಿ ನಡೆಯಿತು. ಪ್ರಧಾನಿ ಸೆಲ್ಫಿ ತೆಗೆಸಿಕೊಳ್ಳಲು ಉದಾರವಾಗಿ ಒಪ್ಪಿಕೊಂಡರು ಎನ್ನಲಾಗಿದೆ.
ನ್ಯಾಯಾಧೀಶರು ಹಾಗೆ ಮಾಡಿದ್ದು ನಿಜವಾದರೆ ಅದು ನಿಜಕ್ಕೂ ಖೇದಕರ ಎಂದು ಹಿರಿಯ ನ್ಯಾಯಾಂಗ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಹೇಳಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ 150ನೆ ವರ್ಷಾಚರಣೆ ಸಮಾರಂಭಕ್ಕಾಗಿ ಮೋದಿ ಅಲ್ಲಿಗೆ ತೆರಳಿದ್ದರು. 2016ರ ಮಾರ್ಚ್ 13ರಂದು ರಾಷ್ಟ್ರಪತಿ ಪ್ರಣಬ್‌ಮುಖರ್ಜಿ 150ನೆ ವರ್ಷಾಚರಣೆಗೆ ಚಾಲನೆ ನೀಡಿದ್ದರು. ಅಲಹಾಬಾದ್‌ಗೆ ಆಗಮಿಸಿದ ತಕ್ಷಣ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಬಳಿಕ ಹೈಕೋರ್ಟ್‌ನಲ್ಲಿ ಚಹಾಕೂಟದಲ್ಲಿ ಪಾಲ್ಗೊಂಡರು.
ಕೃಪೆ : catchnews.com