ಕೊರಗರ ಅನಾರೋಗ್ಯದ ಬಗ್ಗೆ ಡಿಎನ್‌ಎ ಪರೀಕ್ಷೆ
ಮಂಗಳೂರು,ಜೂ.14: ದ.ಕ ಜಿಲ್ಲೆಯ ಮೂಲ ನಿವಾಸಿ ಕೊರಗರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳ ಅಧ್ಯಯನಕ್ಕೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ಡಿಎನ್‌ಎ ಕೇಂದ್ರದ ನಿರ್ದೇಶಕ ಪ್ರೊ.ಪಿ.ಬಿ.ಗಯ್ ನೇತೃತ್ವದಲ್ಲಿ ಜೂ.15 ಮತ್ತು 16 ರಂದು ಎರಡು ದಿನಗಳ ಕಾಲ ಕೊರಗ ಜನಾಂಗದವರ ರಕ್ತ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಅಧ್ಯಯನ ನಡೆಸಲಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಮೂಲ ನಿವಾಸಿ ಕೊರಗ ಜನಾಂಗದ ಜನಸಂಖ್ಯೆ ಕ್ಷೀಣಿಸುತ್ತಿರುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಪಿ.ಐ. ಶ್ರೀವಿದ್ಯಾ ಈ ವಿಷಯ ತಿಳಿಸಿದರು.
ಕೊರಗರು ಮೂಲತ: ಪೌರಕಾರ್ಮಿಕ ವೃತ್ತಿಯನ್ನು ಅವಲಂಬಿಸಿದ್ದು, ಅವರಲ್ಲಿ ಬಹುತೇಕರು ಮದ್ಯಪಾನ, ಧೂಮಪಾನಗಳಿಗೆ ಅಂಟಿಕೊಂಡಿರುವ ಕಾರಣ ಕ್ಯಾನ್ಸರ್, ಕ್ಷಯರೋಗಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಕೊರಗರು ಸರಕಾರ ನೀಡುತ್ತಿರುವ ಪೌಷ್ಠಿಕ ಆಹಾರಗಳನ್ನು ಸೇವಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಡಿಎನ್‌ಎ ಪರೀಕ್ಷೆಯಿಂದ ಕೊರಗರಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊರಗರ ಕಾಲನಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವಂತೆ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆೆ ಸಿಇಒ ಸೂಚಿಸಿದರು.
ಎ.ಜೆ. ಆಸ್ಪತ್ರೆಯಿಂದ ಆರೋಗ್ಯ ತಪಾಸಣೆ
ನಗರದ ಎ.ಜೆ. ಆಸ್ಪತ್ರೆ ವತಿಯಿಂದ ಕೊರಗರ ಕಾಲನಿಗಳಲ್ಲಿ ಸಂಚಾರಿ ಆರೋಗ್ಯ ಘಟಕ ಆರೋಗ್ಯ ತಪಾಸಣೆ ನಡೆಯಲಿದೆ. ಈ ಸಂಬಂಧ ಜೂ.19ರಂದು ಮುಲ್ಕಿ ಹೋಬಳಿ ಕೆರೆಕಾಡು ಕೊರಗರ ಕಾಲನಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಶ್ರೀವಿದ್ಯಾ ತಿಳಿಸಿದರು.
225 ಕಾಲೋನಿಗಳಲ್ಲಿ 4,858 ಮಂದಿ ವಾಸಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೇಮಲತಾ ಮಾತನಾಡಿ, ಜಿಲ್ಲೆಯಲ್ಲಿ (ಅವಿಭಜಿತ ದ.ಕ ಜಿಲ್ಲೆಯಲ್ಲಿ) ಜನಗಣತಿ ಆಧಾರದಲ್ಲಿ 1961ರಲ್ಲಿ 6,382, 1971ರಲ್ಲಿ 7,620, 1981ರಲ್ಲಿ 9,439 ಮತ್ತು 1991 ರಲ್ಲಿ 11,656 ಕೊರಗರ ಜನಸಂಖ್ಯೆ ದಾಖಲಾಗಿದ್ದು 2001ರ ಜನಗಣತಿಯಂತೆ ಕೊರಗರ ಜನಸಂಖ್ಯೆ 4,858 ಇದೆ ಎಂದು ಮಾಹಿತಿ ನೀಡಿದರು. ಒಟ್ಟು 1,206 ಕುಟುಂಬಗಳ ಸಂಖ್ಯೆ ಇದ್ದು ಇವರಲ್ಲಿ 2,465 ಗಂಡಸರು 2,393 ಹೆಂಗಸರು ಸೇರಿ ಒಟ್ಟು 225 ಕಾಲನಿಗಳಲ್ಲಿ 4,858 ಜನ ವಾಸವಾಗಿದ್ದಾರೆ ಎಂದರು.
ದ.ಕ ಜಿಲ್ಲೆಯಲ್ಲಿ 2001ರಲ್ಲಿ ಕೊರಗ ಜನಾಂಗದವರಲ್ಲಿ 1,000 ಗಂಡಸರಿಗೆ 986 ಹೆಂಗಸರಿದ್ದರು. ಈ ಪ್ರಮಾಣ 2011 ರಲ್ಲಿ 1,000ಕ್ಕೆ 973 ಅನುಪಾತದಲ್ಲಿದೆ. ದ.ಕ. ಜಿಲ್ಲೆಯಲ್ಲಿ 2011ರ ಆಗಸ್ಟ್‌ನಿಂದ 2016 ರ ಮೇ ಅಂತ್ಯದವರೆಗೆ ಮಂಗಳೂರು, ದೇರಳಕಟ್ಟೆ, ಪುತ್ತೂರು, ಉಜಿರೆ ಮುಂತಾದೆಡೆಗಳ 10 ಹೈಟೆಕ್ ಆಸ್ಪತ್ರೆಗಳಲ್ಲಿ ಒಟ್ಟು 448 ಕೊರಗರಿಗೆ ವಿವಿಧ ಕಾಯಿಲೆಗಳಲ್ಲಿ 87.63 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸೆ ಒದಗಿಸಲಾಗಿದೆ ಎಂದು ಹೇಮಲತಾ ವಿವರ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಮುಂತಾದವರು ಉಪಸ್ಥಿತರಿದ್ದರು.
ಕೊರಗರ ಪೌಷ್ಠಿಕ ಆಹಾರವಸ್ತುಗಳ ಮಾರಾಟ
ಕೊರಗ ಸಮುದಾಯಕ್ಕೆ ಸರಕಾರದಿಂದ ನೀಡಲಾಗುತ್ತಿರುವ ಉಚಿತ ಪೌಷ್ಠಿಕಾಂಶಯುಕ್ತ ಅಕ್ಕಿ ಬೇಳೆ, ಅಡುಗೆ ಎಣ್ಣೆ, ನಂದಿನಿ ತುಪ್ಪ, ಕೆಂಪು ಕಡ್ಲೆಕಾಳು, ಸೂರ್ಯಕಾಂತಿ ಎಣ್ಣೆ ಇತ್ಯಾದಿಗಳನ್ನು ಮಾರಾಟ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದಾಗಿ ಸಭೆಯಲ್ಲಿ ಜಿ.ಪಂ. ಸಿಇಒ ಶ್ರೀವಿದ್ಯಾ ಅವರೇ ಆತಂಕ ವ್ಯಕ್ತಪಡಿಸಿದರು.ಕೊರಗರ ಆರೋಗ್ಯ ಸುಧಾರಣೆಗಾಗಿ ಸರಕಾರ ನೀಡುತ್ತಿರುವ ಆಹಾರ ವಸ್ತುಗಳ ದುರುಪಯೋಗವನ್ನು ಸಹಿಸಲು ಸಾಧ್ಯವಿಲ್ಲ ಎಂದು ಶ್ರೀವಿದ್ಯಾ ಈ ಸಂದರ್ಭ ತಿಳಿಸಿದರು.