×
Ad

ಕೈರಾನಾದಿಂದ ವಲಸೆ ಪ್ರಮಾಣ ಇನ್ನೂ ಹೆಚ್ಚು: ಬಿಜೆಪಿ ಸಂಸದ ಹುಕುಂ ಸಿಂಗ್ ಹೇಳಿಕೆ

Update: 2016-06-14 18:44 IST

ಕೈರಾನಾ(ಉ.ಪ್ರ.),ಜೂ.14: ಶಾಮ್ಲಿ ಜಿಲ್ಲೆಯ ಕೈರಾನಾದಿಂದ ಹಿಂದುಗಳ ವಲಸೆಯ ಕುರಿತು ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ಸ್ಥಳೀಯ ಬಿಜೆಪಿ ಸಂಸದ ಹುಕುಂ ಸಿಂಗ್ ಅವರು, ತಮ್ಮ ಆಸ್ತಿಪಾಸ್ತಿಗಳನ್ನು ತೊರೆದು ಗುಳೆ ಹೋಗಿರುವ ಹಿಂದು ಕುಟುಂಬಗಳ ಸಂಖ್ಯೆ 400ರಿಂದ 500ಕ್ಕೇರಬಹುದು ಎಂದು ಹೇಳಿದ್ದಾರೆ. ಆದರೆ ಕೆಲವು ಜನರು ಊರನ್ನು ತೊರೆದಿದ್ದಾರೆ, ಇದಕ್ಕೆ ಆರ್ಥಿಕ ಸಮಸ್ಯೆಗಳು ಕಾರಣವೇ ಹೊರತು ಕೋಮುವಾದಿ ಚಟುವಟಿಕೆಗಳಲ್ಲ ಎಂದು ಜಿಲ್ಲಾಧಿಕಾರಿ ಸುಜೀತ ಕುಮಾರ್ ಸ್ಪಷ್ಟಪಡಿಸಿದ್ದಾರೆ.

 ಊರನ್ನು ತೊರೆದಿರುವ ಕುಟುಂಬಗಳ ಸಂಖ್ಯೆ ನಾಲ್ಕೈದು ನೂರಕ್ಕೆ ತಲುಪಬಹುದು. ಇಲ್ಲಿ ಆರೋಪಿ ಒಬ್ಬನಲ್ಲ, ಅವರು ಡಝನ್ನುಗಟ್ಟಲೆ ಸಂಖ್ಯೆಯಲ್ಲಿದ್ದಾರೆ ಎಂದು ಸಿಂಗ್ ಹೇಳಿದರು. ಅವರ ಹೆಸರುಗಳಿಂದಲೇ ಅವರು ಯಾರು ಎಂದು ಊಹಿಸಬಹುದು ಎಂದರು. ಕೈರಾನಾದಲ್ಲಿ ಶೇ.85ರಷ್ಟು ಜನರು ಮುಸ್ಲಿಮ ಸಮುದಾಯಕ್ಕೆ ಸೇರಿದ್ದು,ಗೂಂಡಾಗಳ ಉಪದ್ರವ ತಾಳಲಾಗದೆ 346 ಕುಟುಂಬಗಳು ಊರನ್ನು ತೊರೆದಿವೆ ಎಂದು ಸಿಂಗ್ ಈ ಹಿಂದೆ ಹೇಳಿದ್ದರು.

ಕೈರಾನಾ 2013ರಲ್ಲಿ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು.

ಆದರೆ ಕೆಲವು ಜನರು ಕೈರಾನಾವನ್ನು ತೊರೆದಿರುವುದಕ್ಕೆ ಕೋಮು ವಿಷಯ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಕಾರಣ ಎನ್ನುವುದನ್ನು ಸುಜೀತ ಕುಮಾರ ತಳ್ಳಿಹಾಕಿದ್ದಾರೆ.

   ಈವರೆಗೆ 119 ಕುಟುಂಬಗಳ ಪಟ್ಟಿಯನ್ನು ನಾವು ತನಿಖೆಗೊಳಪಡಿಸಿದ್ದೇವೆ. ಅದರಲ್ಲಿಯ ಸುಮಾರು 10-15 ಕುಟುಂಬಗಳು ಇನ್ನೂ ಕೈರಾನಾದಲ್ಲಿಯೇ ವಾಸವಾಗಿವೆ. ಸುಮಾರು 68 ಕುಟುಂಬಗಳು ಆರ್ಥಿಕ ಕಾರಣಗಳಿಂದಾಗಿ 10-15 ವರ್ಷಗಳ ಹಿಂದೆಯೇ ಈ ಪ್ರದೇಶದಿಂದ ವಲಸೆ ಹೋಗಿವೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದಾಗಿ ಊರು ತೊರೆದಿರುವ ಒಂದೂ ಕುಟುಂಬ ನಮಗೆ ಈವರೆಗೆ ಪತ್ತೆಯಾಗಿಲ್ಲ ಎಂದು ಒತ್ತಿ ಹೇಳಿದ ಅವರು, ಕೈರಾನಾ ಪಟ್ಟಣವು ಸದಾ ಶಾಂತಿಯುತವಾಗಿದ್ದು,ಯಾವುದೇ ಕೋಮು ಚಟುವಟಿಕೆಗಳು ಅಲ್ಲಿ ನಡೆಯುತ್ತಿಲ್ಲ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಈ ಪ್ರದೇಶವು ಶಾಂತವಾಗಿತ್ತು. 2013ರ ಮುಝಫ್ಫರನಗರ ದಂಗೆಗಳ ಸಂದರ್ಭದಲ್ಲಿಯೂ ಇಲ್ಲಿಯ ಜನರು ಪ್ರಬಲ ಭ್ರಾತೃತ್ವ ಸಂದೇಶಗಳನ್ನು ರವಾನಿಸಿದ್ದರು ಎಂದರು.

ಅಲಹಾಬಾದ್‌ನಲ್ಲಿ ಇತ್ತೀಚಿಗೆ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭ ಹಿರಿಯ ಬಿಜೆಪಿ ನಾಯಕರು ರಾಜ್ಯದ ಎಸ್‌ಪಿ ಸರಕಾರದ ವಿರುದ್ಧ ದಾಳಿ ನಡೆಸಲು ಕೈರಾನಾದಿಂದ ಹಿಂದುಗಳ ವಲಸೆ ವಿಷಯವನ್ನು ಕೆದಕಿದ್ದರು. ಮುಂದಿನ ವರ್ಷ ಈ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ರವಿವಾರ ರಾಷ್ಟ್ರೀಯ ಕಾರ್ಯಕಾರಿಣಿಯನುದ್ದೇಶಿಸಿ ಮಾತನಾಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೈರಾನಾ ವಿಷಯವನ್ನು ಪ್ರಸ್ತಾಪಿಸಿದ್ದರು.

ಕೈರಾನಾಕ್ಕೆ ಭೇಟಿ ನೀಡಿ ಅಲ್ಲಿಯ ಸ್ಥಿತಿಯನ್ನು ಅಧ್ಯಯನ ಮಾಡಲು ಸಮಿತಿಯೊಂದನ್ನು ಸಹ ಬಿಜೆಪಿ ರಚಿಸಿದೆ.

ತನ್ಮಧ್ಯೆ ಬಿಜೆಪಿ ನಾಯಕರು ಅಪ್ರಾಮಾಣಿಕರು ಎಂದು ಜರೆದಿರುವ ಮುಖ್ಯಮಂತ್ರಿ ಅಖಿಲೇಶ ಯಾದವ, ಈ ವಿಷಯದಲ್ಲಿ ಅವರು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಬಿಜೆಪಿಯಿಂದ ಒಳ್ಳೆಯ ಕಾರ್ಯಗಳನ್ನು ತಾನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News