ಮದುವೆ ಹೆಸರಲ್ಲಿ ಶಿಕ್ಷಕಿಯ ಅತ್ಯಾಚಾರ, ಬ್ಲಾಕ್‌ಮೇಲ್: ಆರೋಪಿ ಶಿಕ್ಷಕನ ಬಂಧನ

Update: 2016-06-14 14:38 GMT

ಕೊಣಾಜೆ, ಜೂ.14: ಶಿಕ್ಷಕಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ನಗ್ನಚಿತ್ರಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸರು ಆರೋಪಿ ಶಿಕ್ಷಕನೋರ್ವನನ್ನು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದೇರಳಕಟ್ಟೆ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿರುವ, ಮೈಸೂರಿನ ನರಸಿಂಹ ಮೂರ್ತಿ(35) ಎಂದು ಗುರುತಿಸಲಾಗಿದೆ.

ನಂದಾವರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ, ಮಂಡ್ಯ ಮೂಲದ ಶಿಕ್ಷಕಿ ಕೊಣಾಜೆ ಠಾಣೆಗೆ ದೂರು ನೀಡಿದ್ದರು. ಇವರು ಇತ್ತೀಚೆಗಷ್ಟೆ ನಂದಾವರ ಶಾಲೆಗೆ ಶಿಕ್ಷಕಿಯಾಗಿ ಬಂದಿದ್ದರು. ಹಾಗೆಯೇ ಆರೋಪಿ ಐದು ತಿಂಗಳ ಹಿಂದೆಯಷ್ಟೇ ದೇರಳಕಟ್ಟೆ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದ. ಇಬ್ಬರೂ 2014ರಲ್ಲಿ ಮೈಸೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪರೀಕ್ಷೆ ಬರೆಯಲು ತೆರಳಿದ್ದಾಗ ಪರಿಚಯವಾಗಿದ್ದು ಮುಂದಕ್ಕೆ ಪ್ರೇಮಾಂಕುರವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜೂ.2ರಂದು ತಾನು ತಂಗಿದ್ದ ದೇರಳಕಟ್ಟೆಯ ಸದ್ಗುರು ವಸತಿಗೃಹ ಸಮೀಪದ ಕೊಠಡಿಗೆ ಕರೆಸಿಕೊಂಡು ಬಳಿಕ ಆರೋಪಿ ಮದುವೆ ಆಗುವುದಿಲ್ಲ ಎಂದು ಹೇಳಿ ಶಿಕ್ಷಕಿಯ ಅರೆನಗ್ನ ಚಿತ್ರಗಳನ್ನು ತೋರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಬಲವಂತವಾಗಿ ತನ್ನನ್ನು ವಿವಸ್ತ್ರಗೊಳಿಸಲು ಮುಂದಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಕೆಲವು ಅಮೂಲ್ಯ ದಾಖಲೆ ಪತ್ರಕ್ಕೆ ಹಾಗೂ ಚೆಕ್ ಪುಸ್ತಕಕ್ಕೆ ಬಲವಂತದಿಂದ ಸಹಿ ಹಾಕಿಸಿಕೊಂಡಿದ್ದಾನೆ ಎಂದು ಶಿಕ್ಷಕಿ ದೂರಿದ್ದಾರೆ.

ಕೊಣಾಜೆ ಠಾಣೆಯಲ್ಲಿ ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News