ವಿದ್ಯಾರ್ಥಿನಿಯ ಮಾನಭಂಗ ಯತ್ನ ಪ್ರಕರಣ: ಆರೋಪಿ ರಿಕ್ಷಾ ಚಾಲಕನಿಗೆ ನ್ಯಾಯಾಂಗ ಬಂಧನ
ಪುತ್ತೂರು, ಜೂ.14: ಪುತ್ತೂರು ನಗರದ ಸರಕಾರಿ ಪ್ರೌಢ ಶಾಲೆಯೊಂದರಲ್ಲಿ ಕಲಿಯುತ್ತಿರುವ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ನೆಕ್ಕಿಲು ನಿವಾಸಿಯಾದ ರಿಕ್ಷಾ ಚಾಲಕ ಸವೀನ್ ರೈ ಯಾನೆ ಕಿಶೋರ್ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿ.
ಪುತ್ತೂರು ನಗರದ ಪ್ರೌಢ ಶಾಲೆಯೊಂದರಲ್ಲಿ ಕಲಿಯುತ್ತಿರುವ, ಬನ್ನೂರು ಗ್ರಾಮದ ನೀರ್ಪಾಜೆ ಸಮೀಪದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಶನಿವಾರ ಮಧ್ಯಾಹ್ನ ಶಾಲೆಬಿಟ್ಟು ಮನೆಗೆ ಹೋಗಲು ರಸ್ತೆ ಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಆರೋಪಿ ರಿಕ್ಷಾ ಚಾಲಕ ಸವೀನ್ ರೈ ಎಂಬಾತ ಆಕೆಯನ್ನು ತನ್ನ ರಿಕ್ಷಾದಲ್ಲಿ ಕುಳ್ಳಿರಿಸಿ, ಮನೆ ತನಕ ಬಿಡುವುದಾಗಿ ನಂಬಿಸಿ ಕರೆದುಕೊಂಡು ನೀರ್ಪಾಜೆ ತನಕ ಹೋಗಿ ಅಲ್ಲಿ ಆಕೆಯ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿತ್ತು.
ಘಟನೆಗೆ ಸಂಬಂಧಿಸಿ ಬಾಲಕಿಯ ಮಾವ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಯನ್ನು ಬಂಧಿಸಿದ ಪುತ್ತೂರು ನಗರ ಪೊಲೀಸರು ಆತನ ವಿರುದ್ದ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.