ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುತ್ತಿರುವ ಸುಳ್ಳು ಸ್ಕಾಲರ್‌ಶಿಪ್ ಸಂದೇಶಗಳು
ವಿಟ್ಲ, ಜೂ.14: ಸಾಮಾಜಿಕ ಜಾಲತಾಣಗಳು ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಿದೆಯೋ ಅದಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಜನರನ್ನು ವಂಚಿಸುವ ತಾಣಗಳಾಗಿ ಕಾರ್ಯನಿರ್ವಹಿಸುತ್ತಿದೆ. ಹಲವಾರು ಮಿಥ್ಯ ಸುದ್ದಿಗಳು ದಿನವೊಂದಕ್ಕೆ ಗ್ರೂಪಿನಿಂದ ಗ್ರೂಪಿಗೆ ಹರಿದಾಡಿ ಜನ ಸಮುದಾಯವನ್ನೇ ದಿಗ್ಭ್ರಮೆಗೆ ತಳ್ಳುವಂತಹ ಅದೆಷ್ಟೋ ಘಟನೆಗಳು ನಡೆದು ಹೋಗಿದೆ. ಈ ಸಾಲಿಗೆ ಇದೀಗ ಮತ್ತೊಂದು ಸುದ್ದಿ ಸೇರ್ಪಡೆಗೊಂಡಿದ್ದು, ಕಳೆದ ಕೆಲವು ದಿನಗಳಿಂದ ಜಾಲತಾಣಗಳಲ್ಲಿ ಮಿಂಚಿನ ಸಂಚಾರವನ್ನು ಮಾಡುತ್ತಿದೆ.
ಈ ಬಾರಿ ಮಾತ್ರ ವಿದ್ಯಾರ್ಥಿ ಸಮುದಾಯವನ್ನು ವಂಚಿಸುವ ಅಥವಾ ಗೊಂದಲಕ್ಕೆ ತಳ್ಳುವ ಸಂದೇಶ ಹರಿದಾಡುತ್ತಿದೆ. ಕೇಂದ್ರ ಸರಕಾರವು ಅಟಲ್ ಬಿಹಾರಿ ವಾಜಪೇಯಿ ಹಾಗೂ ಡಾ. ಎ.ಪಿ.ಜೆ .ಅಬ್ದುಲ್ ಕಲಾಂರ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರಿಗೆ 10 ಸಾವಿರ ರೂ. ಹಾಗೂ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 25 ಸಾವಿರ ರೂ.ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂಬ ಸಂದೇಶವೊಂದು ಮೊಬೈಲ್‌ನಿಂದ ಮೊಬೈಲ್‌ಗೆ ಸಾಮಾಜಿಕ ತಾಣಗಳಲ್ಲಿ ನಿರಂತರವಾಗಿ ಹರಿದಾಡುತ್ತಿದೆ. ಆದರೆ ಇಂತಹ ಯಾವುದೇ ವಿದ್ಯಾರ್ಥಿ ವೇತನದ ಬಗ್ಗೆ ಸರಕಾರದ ಯಾವುದೇ ಇಲಾಖೆಯಿಂದ ಅಧಿಕೃತ ಪ್ರಕಟನೆ ಹೊರಬಿದ್ದಿಲ್ಲ. ಯಾರೋ ಕಿಡಿಗೇಡಿಗಳು ಈ ಮಿಥ್ಯ ಸಂದೇಶವನ್ನು ಸೃಷ್ಟಿಸಿ ಹರಿಯಬಿಟ್ಟಿದ್ದು, ಇದು ವಿದ್ಯಾರ್ಥಿ ಸಮುದಾಯದ ಪಾಲಿಗೆ ತೀವ್ರ ಗೊಂದಲಕ್ಕೆ ಕಾರಣವಾಗಿದೆ.
ಈ ಸಂದೇಶವನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರು ಊರಿನಿಂದ ಊರಿಗೆ, ಹಳ್ಳಿಯಿಂದ ಪೇಟೆಗೆ ಅಲೆದಾಡುತ್ತಿರುವ ದೃಶ್ಯಗಳೂ ಕಂಡು ಬರುತ್ತಿದೆ. ಈ ಮಿಥ್ಯ ಸಂದೇಶವನ್ನು ಜನ ನಂಬುವಂತೆ ಮಾಡಲು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲರ ಕಚೇರಿಯಿಂದ ಹೊರಡಿಸಲಾದ ರೀತಿಯ ನೋಟೀಸನ್ನು ಜಾಲ ತಾಣಗಳಿಗೆ ತುಂಬಿಸಲಾಗಿದೆಯಲ್ಲದೆ ಈ ಬಗ್ಗೆ www.desw.gov.in.scholarship ಎಂಬ ವೆಬ್‌ಸೈಟ್ ಲಿಂಕನ್ನೂ ರವಾನಿಸಲಾಗುತ್ತಿದೆ. ಆದರೆ ಇಲ್ಲಿ ರವಾನಿಸಲಾಗಿರುವ ವೆಬ್ ಲಿಂಕ್ ತೆರೆದು ನೋಡಿದರೆ ಮೇಲಿನ ವಿದ್ಯಾರ್ಥಿ ವೇತನಕ್ಕೆ ಯಾವುದೇ ಸಂಬಂಧ ಇರುವುದಿಲ್ಲ. ಆ ಬಗ್ಗೆ ಯಾವುದೇ ಮಾಹಿತಿಯೂ ಅದರಲ್ಲಿ ಕಂಡು ಬರುತ್ತಿಲ್ಲ. ಮೇಲೆ ರವಾನಿಸಿರುವ ವೆಬ್‌ಲಿಂಕ್ ನಿವೃತ್ತ ಸೈನಿಕರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ.
ಈ ಒಂದು ಸಂದೇಶ ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದ ವರ್ಷದಿಂದಲೇ ಹರಿದಾಡುತ್ತಿದ್ದು, ಪ್ರತಿವರ್ಷವೂ ಈ ಬಗ್ಗೆ ವಿದ್ಯಾರ್ಥಿಗಳು ಅಲೆದಾಡಿ ಕೊನೆಗೆ ಬೀಸ್ತು ಬೀಳುವುದು ವಾಡಿಕೆಯಾಗಿದೆ. ಈ ಬಾರಿಯೂ ಈ ಸಂದೇಶ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಸತ್ಯಾಸತ್ಯತೆ ತಿಳಿಯಲು ಹೆಣಗಾಟ ನಡೆಸುತ್ತಿರುವುದು ಕಂಡು ಬರುತ್ತಿದೆ.