ಒರ್ಲ್ಯಾಂಡೊ ಹತ್ಯಾಕಾಂಡ ಹೊರತುಪಡಿಸಿ 72 ಗಂಟೆಗಳಲ್ಲಿ 93 ಮಂದಿ ಗುಂಡಿಗೆ ಬಲಿ
ವಾಷಿಂಗ್ಟನ್, ಜೂ.14: ಒರ್ಲ್ಯಾಂಡೊ ಪಲ್ಸ್ ಕ್ಲಬ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ 49 ಮಂದಿ ಬಲಿಯಾಗಿದ್ದು, ಪೊಲೀಸರು ಹಂತಕನನ್ನು ಗುಂಡಿಟ್ಟು ಸಾಯಿಸುವ ಮುನ್ನ ಆತ ಇತರ 53 ಮಂದಿಯನ್ನು ಗಾಯಗೊಳಿಸಿದ್ದಾನೆ. ಆದರೆ ಅದಕ್ಕಿಂತ ಭೀಕರ ಕಟುಸತ್ಯವನ್ನು ಕ್ಯಾಲಿಪೋರ್ನಿಯಾ ಲೆಫ್ಟಿನೆಂಟ್ ಗವರ್ನರ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೊದ ಮಾಜಿ ಮೇಯರ್ ಗವಿನ್ ನ್ಯೂಸೊವ್ ಬಹಿರಂಗಪಡಿಸಿದ್ದಾರೆ.
ಅವರ ಪ್ರಕಾರ, ಅಮೆರಿಕದಲ್ಲಿ ಕಳೆದ 72 ಗಂಟೆಗಳಲ್ಲಿ ನಡೆದ ಇತರ ಬಂದೂಕು ಹಿಂಸಾಚಾರಗಳಲ್ಲಿ 93 ಮಂದಿ ಬಲಿಯಾಗಿದ್ದಾರೆ!.
ಅವರು ತಮ್ಮ ಸುದ್ದಿಮೂಲವನ್ನು ಉಲ್ಲೇಖಿಸಿಲ್ಲವಾದರೂ, ಬಂದೂಕು ಹಿಂಸೆ ಕುರಿತ ಘಟನಾವಳಿಗಳ ಅಂಕಿಸಂಖ್ಯೆಯನ್ನು ನೋಡಿದಾಗ ಇದಕ್ಕೆ ತಾಳೆಯಾಗುತ್ತದೆ.
ಮೃತಪಟ್ಟವರಲ್ಲಿ ಎಂಎಂಎ ಫೈಟರ್ ಇವಾನ್ ಕೋಲ್ ಕೂಡಾ ಸೇರಿದ್ದಾರೆ. ರಷ್ಯನ್ ರೌಲೆಟ್ ಪರ ಆಡುತ್ತಿದ್ದ ಆತ ತನಗೆ ತಾನೇ ಗುಂಡು ಹಾಕಿಕೊಂಡಿದ್ದಾನೆ. ಇತರ ಬಂದೂಕು ಹಿಂಸಾಚಾರಗಳಲ್ಲಿ 205 ಮಂದಿ ಗಾಯಗೊಂಡಿರುವುದನ್ನೂ ಅವರು ಬಹಿರಂಗಪಡಿಸಿದ್ದಾರೆ.
ನ್ಯೂಮೆಕ್ಸಿಕೊದ ರೋಸ್‌ವೆಲ್‌ನಲ್ಲಿ ನಡೆದ ಸಾಮೂಹಿಕ ಹತ್ಯೆಯಲ್ಲಿ ಐವರು ಬಲಿಯಾಗಿದ್ದಾರೆ. ಈ ಪೈಕಿ ಮೂವರು 14 ವರ್ಷದೊಳಗಿನ ಬಾಲಕಿಯರು. ಜಾನ್ ಡೇವಿಟ್ ವಿಲ್ಲೇಗಸ್ (34) ಈ ಪ್ರಕರಣದ ಆರೋಪಿ. ಈತ ಪತ್ನಿ ಹಾಗೂ ನಾಲ್ವರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿದ್ದಾನೆ.
ಕ್ಯಾಲಿಪೋರ್ನಿಯಾದ ಪನೋರಮಾ ಸಿಟಿಯಲ್ಲಿ ನಡೆದ ಇನ್ನೊಂದು ಶೂಟೌಟ್‌ನಲ್ಲಿ ಇಬ್ಬರು ಹದಿಹರೆಯದ ಯುವತಿಯರು ಹಾಗೂ 20 ವರ್ಷದ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಅಮೆರಿಕದ ಗನ್ ವಾಯಲೆನ್ಸ್ ಆರ್ಚಿವ್‌ನಲ್ಲಿ, ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಂದೇ ಘಟನೆಯಲ್ಲಿ ಮೃತಪಟ್ಟರೆ ದಾಖಲಿಸಲಾಗುತ್ತದೆ.
2012ರ ಅಂಕಿ ಅಂಶಗಳ ಪ್ರಕಾರ, ಅಮೆರಿಕದಲ್ಲಿ ತಲಾ ಬಂದೂಕು ಹತ್ಯೆಗಳು ಇಂಗ್ಲೆಂಡಿನ 30 ಪಟ್ಟು ಇದೆ. ಇಂಗ್ಲೆಂಡಿನಲ್ಲಿ ಒಂದು ಲಕ್ಷ ಮಂದಿಗೆ 0.1ರಷ್ಟು ಮಂದಿ ಗುಂಡಿಗೆ ಬಲಿಯಾಗುತ್ತಿದ್ದರೆ, ಅಮೆರಿಕದಲ್ಲಿ ಈ ಪ್ರಮಾಣ ಪ್ರತಿ ಲಕ್ಷ ಮಂದಿಗೆ 2.9 ಇದೆ. ಅಮೆರಿಕದಲ್ಲಿ 2012ರಲ್ಲಿ ಸಂಭವಿಸಿದ ಒಟ್ಟು ಹತ್ಯೆಗಳಲ್ಲಿ, ಶೇಕಡ 60ರಷ್ಟು ಬಂದೂಕಿನಿಂದ ಹತ್ಯೆಯಾಗಿರುವುದು. ಕೆನಡಾದಲ್ಲಿ ಈ ಪ್ರಮಾಣ ಶೇಕಡ 31 ಇದ್ದರೆ, ಆಸ್ಟ್ರೇಲಿಯಾದಲ್ಲಿ 18.2 ಹಾಗೂ ಇಂಗ್ಲೆಂಡಿನಲ್ಲಿ ಶೇಕಡ 10 ಇದೆ.
ಅಮೆರಿಕದಲ್ಲಿ ಎಷ್ಟು ಬಂದೂಕುಗಳಿವೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಅಂದಾಜಿನ ಪ್ರಕಾರ ಪ್ರತಿ ಮೂವರಲ್ಲಿ ಒಬ್ಬರಿಗೆ ಬಂದೂಕುಗಳಿವೆ. ಅಂದರೆ ಸುಮಾರು 30 ಕೋಟಿ ಬಂದೂಕುಗಳಿವೆ. ಅಂದರೆ ಮನೆಯಲ್ಲಿ ಗಂಡಸರು, ಮಹಿಳೆಯರು ಹಾಗೂ ಮಕ್ಕಳಿಗೂ ತಮ್ಮದೇ ಸ್ವಂತ ಬಂದೂಕುಗಳಿವೆ.