ಮೂಡುಬಿದಿರೆ: ಗೌರಿಕೆರೆಯ ಆವರಣದಲ್ಲಿ ಶ್ರಮದಾನ

Update: 2016-06-14 15:54 GMT

ಮೂಡುಬಿದಿರೆ, ಜೂ.14: ಇಲ್ಲಿನ 18 ಕೆರೆಗಳಲ್ಲಿ ಜೀವಂತವಾಗಿರುವ ಕೆರೆಗಳಲ್ಲಿ ಒಂದಾಗಿರುವ ಗೌರಿಕೆರೆಯಲ್ಲಿ ಮತ್ತು ಆವರಣದಲ್ಲಿ ತುಂಬಿಕೊಂಡಿದ್ದ ಕಸಕಡ್ಡಿ ಮತ್ತು ಗಿಡಗಂಟಿಗಳನ್ನು ಶ್ರಮದಾನದ ತೆಗೆದು ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಯಿತು.

ಕಳೆದ ಕೆಲ ವರ್ಷಗಳಿಂದ ಗೌರಿಕೆರೆಯ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿತ್ತಲ್ಲದೆ ಕೆರೆಯಲ್ಲಿ ಕಸಕಡ್ಡಿಗಳಿಂದ ತುಂಬಿಕೊಂಡು ನೀರು ಹಾಳಾಗಿತ್ತು. ಇದನ್ನರಿತ ದೇವಾಡಿಗರ ಸುಧಾರಕ ಸಂಘ, ಯುವ ವೇದಿಕೆ, ಮಹಿಳಾ ವೇದಿಕೆ ಸದಸ್ಯರು ಹಾಗೂ ಸುತ್ತಮುತ್ತಲಿನ ನಾಗರಿಕರು ಸೇರಿ ಶ್ರಮದಾನದ ಮೂಲಕ ಕೆರೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.

ಪುರಸಬಾ ಸದಸ್ಯ ರತ್ನಾಕರ ದೇವಾಡಿಗ, ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಶಶಿಧರ್ ಶಿರ್ತಾಡಿ, ಕಾರ್ಯದರ್ಶಿ ಶ್ಯಾಮ್ ದೇವಾಡಿಗ, ಮಾಜಿ ಅಧ್ಯಕ್ಷರಾದ ವಿಶ್ವನಾಥ ದೇವಾಡಿಗ, ರತ್ನಾಕರ ಸಿ.ಮೊಯ್ಲಿ, ಯುವ ವೇದಿಕೆಯ ಅಧ್ಯಕ್ಷ ಸಂತೋಷ್ ಕುಮಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ರಮಾ ಪದ್ಮನಾ, ಸಂಘದ ಸದಸ್ಯರುಗಳಾದ ವಸಂತ ದೇವಾಡಿಗ, ಪುರಂದರ ದೇವಾಡಿಗ, ಭಾರತಿ ರತ್ನಾಕರ ದೇವಾಡಿಗ, ವಿಜಯಲಕ್ಷ್ನೀ ರತ್ನಾಕರ್, ಹೇಮಲತಾ ಶೇರಿಗಾರ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಮೂಡುಬಿದಿರೆಯು 18 ಬಸದಿಗಳು 18 ದೇವಸ್ಥಾನಗಳು ಹಾಗೂ 18 ಕೆರೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದೀಗ ಹೆಚ್ಚಿನ ಕೆರೆಗಳು ಹೂಳು ಮತ್ತು ಕಸಕಡ್ಡಿಗಳು ತುಂಬಿಕೊಂಡು ಮುಚ್ಚಿ ಹೋಗಿವೆ. ಇದೀಗ ಉಳಿದಿರುವ ಕೆರೆಗಳಲ್ಲಿ ಗೌರಿ ಕೆರೆಯಲ್ಲಿ ನೀರಿನ ಸಂಪನ್ಮೂಲವಿದೆ. ಇಲ್ಲಿ ಕಸಕಡ್ಡಿಗಳನ್ನು ಹಾಕುತ್ತಿರುವುದರಿಂದ ನೀರು ಹಾಳಾಗಿದೆ. ಇದರಿಂದಾಗಿ ಬೇಸರವಾಗಿ ಈ ಬಾರಿ ಶ್ರಮದಾನ ಮಾಡುವ ಯೋಜನೆಯನ್ನು ದೇವಾಡಿಗರ ಸುಧಾರಕ ಸಂಘವು ಹಾಕಿಕೊಂಡು ಸ್ವಚ್ಛಗೊಳಿಸಿದೆ. ಮುಂದೆ ಇದನ್ನು ಅಭಿವೃದ್ಧಿಗೊಳಿಸಲು ಅನುದಾನಕ್ಕಾಗಿ ಸಚಿವರಿಗೆ ಹಾಗೂ ಪುರಸಭೆಗೆ ಮನವಿ ನೀಡಲಾಗುವುದು.

ರತ್ನಾಕರ ದೇವಾಡಿಗ, ಪುರಸಭಾ ಸದಸ್ಯ

  ಗೌರಿಕೆರೆಯ ಪ್ರದೇಶ ಪ್ರಖ್ಯಾತವಾಗಿದೆ. ಮೂಡುಬಿದಿರೆಯಲ್ಲಿರುವ 18 ಕೆರೆಗಳಲ್ಲಿ ಈಗ 5-6 ಕೆರೆಗಳು ಮಾತ್ರ ಜೀವಂತವಾಗಿವೆ. ಮೊದಲು ಈ ಕೆರೆಯ ನೀರನ್ನು ಬಳಸಿ ಕೃಷಿ ಪರಿಸರದವರು ಮೂರು ಬೆಳೆ ಮಾಡುತ್ತಿದ್ದರು. ಈ ಕೆರೆಯಲ್ಲಿ ಎಪ್ರಿಲ್-ಮೇವರೆಗೆ ನೀರು ಇರುತ್ತದೆ. ಆದರೆ ಕಸ ತುಂಬಿ ಮತ್ತು ಪುರಸಭೆ ಕೂಡಾ ಚರಂಡಿಯ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ಕುಡಿಯಲು ಸಾಧ್ಯವಿಲ್ಲದಂತಾಗಿದೆ. ಪಕ್ಕದಲ್ಲೇ ಇರುವ ಪೊಟ್ಟು ಕೆರೆಯನ್ನು ಪುರಾತತ್ವ ಇಲಾಖೆಯವರು ಸರಿಪಡಿಸಿದ್ದಾರೆ. ಆದರೆ ಇದರಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ತುಂಬುತ್ತದೆ ಹೊರತು ಬೇಸಿಗೆ ಕಾಲದಲ್ಲಿ ನೀರು ಬತ್ತಿ ಹೋಗಿರುತ್ತದೆ. ಆದರೆ ಗೌರಿಕೆರೆಯಲ್ಲಿ ನೀರಿರುತ್ತದೆ. ಸರಕಾರ ಎಚ್ಚೆತ್ತುಕೊಂಡು ಈ ಕೆರೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಕೆರೆ ಅಭಿವೃದ್ಧಿಯಾದರೆ ಪರಿಸರದ 100-150 ಬಾವಿಗಳಿಗೆ ನೀರು ತುಂಬಲು ಸಾಧ್ಯವಿದೆ.

ರತ್ನಾಕರ ಸಿ.ಮೊಯ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News