ಯುರೋಪ್ ತಲುಪುವ ವಲಸಿಗ ಮಕ್ಕಳ ಮೇಲೆ ಅತ್ಯಾಚಾರ: ಯೂನಿಸೆಫ್

Update: 2016-06-14 15:59 GMT

ಜಿನೇವ, ಜೂ. 14: ಯುದ್ಧ ಮತ್ತು ಬಡತನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಯುರೋಪ್‌ಗೆ ಅಪಾಯಕಾರಿ ಪ್ರಯಾಣ ಕೈಗೊಳ್ಳುವ ವಲಸಿಗ ಮಕ್ಕಳು ಹೊಡೆತ, ಅತ್ಯಾಚಾರ ಮತ್ತು ಜೀತಕ್ಕೊಳಗಾಗುವ ಹಾಗೂ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗುವ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯೂನಿಸೆಫ್) ಮಂಗಳವಾರ ಹೇಳಿದೆ.

ಮುಖ್ಯವಾಗಿ ಲಿಬಿಯದಿಂದ ಸಮುದ್ರ ಮಾರ್ಗವಾಗಿ ಇಟಲಿ ತಲುಪುವ ವಲಸಿಗರು ಮತ್ತು ನಿರಾಶ್ರಿತರಲ್ಲಿ ಅಪ್ರಾಪ್ತರ ಸಂಖ್ಯೆ ಹೆಚ್ಚುತ್ತಿದೆ ಎಂದು ‘ಡೇಂಜರ್ ಎವ್ರಿ ಸ್ಟೆಪ್ ಆಫ್ ದ ವೇ (ದಾರಿಯ ಪ್ರತಿಯೊಂದು ಹೆಜ್ಜೆಯಲ್ಲೂ ಅಪಾಯ)’ ಎಂಬ ತನ್ನ ವರದಿಯಲ್ಲಿ ಅದು ಹೇಳಿದೆ.

 ಈ ವರ್ಷ ಜೂನ್ 4ರವರೆಗೆ ಸಮುದ್ರ ಮಾರ್ಗ ಮೂಲಕ ಸುಮಾರು 2,06,200 ಮಂದಿ ಯುರೋಪ್ ತಲುಪಿದ್ದು, ಆ ಪೈಕಿ ಮೂವರಲ್ಲಿ ಒಂದು ಮಗು ಆಗಿದೆ ಎಂದು ವಿಶ್ವಸಂಸ್ಥೆ ನಿರಾಶ್ರಿತ ಸಂಸ್ಥೆಯ ಅಂಕಿಅಂಶಗಳನ್ನು ಉಲ್ಲೇಖಿಸಿ ಯೂನಿಸೆಫ್ ತನ್ನ ವರದಿಯಲ್ಲಿ ತಿಳಿಸಿದೆ.

 ‘‘ಪ್ರಯಾಣದ ಪ್ರತಿಯೊಂದು ಹೆಜ್ಜೆಯೂ ಅಪಾಯದಿಂದ ಕೂಡಿದೆ. ನಾಲ್ವರು ಮಕ್ಕಳ ಪೈಕಿ ಒಂದು ಮಗು ಹೆತ್ತವರು ಅಥವಾ ರಕ್ಷಕರು ಇಲ್ಲದೆ ಪ್ರಯಾಣಿಸುತ್ತಿರುವುದರಿಂದ ಅಪಾಯ ಹೆಚ್ಚಿದೆ’’ ಎಂದು ಯೂನಿಸೆಫ್ ಹೇಳಿದೆ.

 ಕ್ರಿಮಿನಲ್ ಮಾನವ ಸಾಗಣೆ ಜಾಲಗಳು ಮಕ್ಕಳು ಮತ್ತು ಮಹಿಳೆಯರನ್ನು ಶೋಷಣೆಗೆ ಗುರಿಪಡಿಸುತ್ತಿವೆ ಎನ್ನುವುದಕ್ಕೆ ಬಲವಾದ ಪುರಾವೆಯಿದೆ ಎಂದಿದೆ.

‘‘ಲಿಬಿಯದಲ್ಲಿರುವಾಗ ಬಾಲಕರು ಮತ್ತು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತದೆ ಹಾಗೂ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ ಎಂಬುದಾಗಿ ಇಟಲಿಯ ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ. ಅತ್ಯಾಚಾರ ನಡೆದ ಫಲವಾಗಿ ಇಟಲಿ ತಲುಪಿದ ಕೆಲವು ಬಾಲಕಿಯರು ಗರ್ಭಿಣಿಯರಾಗಿದ್ದಾರೆ’’ ಎಂದು ಯೂನಿಸೆಫ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News