×
Ad

ಬೆಳ್ತಂಗಡಿ: 94ಸಿ ಯೋಜನೆ ಅಕ್ರಮದ ಕುರಿತು ಸದಸ್ಯರ ಆಕ್ರೋಶ

Update: 2016-06-14 23:21 IST

ಬೆಳ್ತಂಗಡಿ, ಜೂ.14: ಲಂಚಗುಳಿತನಕ್ಕೆ ರಹದಾರಿಯಾಗಿರುವ 94ಸಿ ಯೋಜನೆಯಲ್ಲಿ ಬಡವರು ನೊಂದು ಹೋಗಿದ್ದಾರೆ. ಗ್ರಾ.ಪಂ.ನ ಗ್ರಾಮಕರಣಿಕರು, ಉಗ್ರಾಣಿಗಳು ಇಂತಿಷ್ಟು ಜಾಗಕ್ಕೆ ಇಂತಿಷ್ಟು ಹಣ ಎಂದು ನಿಗದಿಸಿಕೊಂಡು ಬಡವ ಬಲ್ಲಿದ ಎನ್ನದೆ ಪೀಕಿಸುತ್ತಿದ್ದಾರೆ. ಲಂಚ ಕೊಟ್ಟರೂ ಕೆಲಸ ಆಗುವುದಿಲ್ಲ. ವಿಎಗಳು ಅಹಂಕಾರಿಗಳಂತೆ ವರ್ತಿಸುತ್ತಿದ್ದಾರೆ. ಕೆಲವು ಪಂ.ಗಳಲ್ಲಿ ಯೋಜನೆಗೆ ಸಂಬಂಧಪಟ್ಟಂತಹ ಪೈಲುಗಳು, ಪುಸ್ತಕಗಳು ಕಾಣೆಯಾಗಿವೆ. ಇನ್ನು ಕೆಲವಡೆ ಅವೆಲ್ಲ ವಿಎಗಳ ಮನೆಯಲ್ಲಿರುತ್ತವೆ. ವಿಎ ಗಳು ಕೆಲವು ಎಜೆಂಟರ ಮೂಲಕ ಹಣ ಪಾವತಿಸುವುದನ್ನೂ ಮಾಡುತ್ತಿದ್ದಾರೆ. ಕೆಲವು ಪಂಚಾಯತ್‌ಗಳು ಮನೆ ಸಂಖ್ಯೆ ಬೇಕು ಎಂದು ಕೇಳಿದರೆ ಇನ್ನು ಕೆಲವಡೆ ಬೇಡ ಎನ್ನುತ್ತಾರೆ. ಹಲವು ಪಂಚಾಯತ್‌ಗಳಲ್ಲಿ ಅಲ್ಲಿನ ಸದಸ್ಯರಿಗೆ ಈ ಯೋಜನೆಯ ಸಮರ್ಪಕ ಮಾಹಿತಿಯೇ ಇಲ್ಲವಾಗಿದೆ. ಕೊಕ್ಕಡದಲ್ಲಿ ಅರ್ಜಿಗಳನ್ನು ಇನ್ನೂ ಸ್ವೀಕರಿಸುತ್ತಿಲ್ಲ. ಶ್ರೀಮಂತರೆನೋ ಹಣಕೊಟ್ಟು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಬಡವರ ಗತಿಯೇನು ಎಂದು ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮೊದಲ ಸಾಮಾನ್ಯ ಸಭೆ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಶಾಸಕ ಕೆ.ವಸಂತ ಬಂಗೇರ ಹಾಗೂ ಜಿ.ಪಂ ತಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು. 94ಸಿಯ ವಿಫಲತೆಯನ್ನು ಗಂಭೀರವಾಗಿ ಸ್ವೀಕರಿಸಿದ ಶಾಸಕರು, ಜೂ.28 ರಂದು ಬೆಳಗ್ಗೆ 11 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ಕಂದಾಯ ಇಲಾಖೆಯ ಸಭೆ ಕರೆಯುತ್ತೇನೆ. ಆ ದಿನ ಎಲ್ಲಾ ಪಿಡಿಒ, ವಿಎ, ಉಗ್ರಾಣಿಗಳನ್ನು ಬರ ಹೇಳಲಾಗುವುದು ಎಂದರು.

ಪಡಿತರ ಚೀಟಿಯ ಗೊಂದಲದ ಬಗ್ಗೆಯೂ ಚರ್ಚೆ ನಡೆಯಿತು. ಆಧಾರ್‌ಕಾರ್ಡ್ ಮಾಡಿಸಲು ಜನ ಇನ್ನೂ ಪರದಾಡುತ್ತಿದ್ದು, ಕೆಲವಡೆ ಕಂಪ್ಯೂಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು, ಎರಡು ಕಂಪ್ಯೂಟರ್‌ಗಳ ಬೇಡಿಕೆ ಇರುವುದು, ಆಧಾರ್ ಕೇಂದ್ರಗಳಲ್ಲಿನ ತಾತ್ಕಾಲಿಕ ಸಿಬ್ಬಂದಿಗೆ ವೇತನ ಸಿಗದೇ ಇರುವುದನ್ನು ಸದಸ್ಯರು ಶಾಸಕರ ಮುಂದಿಟ್ಟರು.

ವೇಣೂರಿನಲ್ಲಿ ಗ್ರಾಮಕರಣಿಕರ ವಸತಿಗಾಗಿ 15 ಸೆಂಟ್ಸ್ ಜಾಗ ಮೀಸಲಾಗಿಡಲಾಗಿದೆ. ಆ ಜಾಗಕ್ಕೆ ಅಕ್ರಮ ಸಕ್ರಮದಡಿಯಲ್ಲಿ ದೇವದಾಸ ಹೆಗ್ಡೆ ಹಾಗೂ ಸುಬ್ಬಣ್ಣ ಹೆಗ್ಡೆ ಎಂಬುವರು ಅರ್ಜಿ ಹಾಕಿದ್ದಾರೆ. ಇದು ಶಾಸಕರ ಗಮನಕ್ಕೂ ಬಂದಿದೆ. ಕಂದಾಯ ಇಲಾಖೆಯ ಜಾಗ ಮಾತ್ರವಲ್ಲದೆ ಅದು ಡಿಸಿಮನ್ನಾ ಜಾಗದ ವ್ಯಾಪ್ತಿಯಲ್ಲೂ ಇದೆ ಎಂದು ಸದಸ್ಯ ವಿಜಯಗೌಡ ತಿಳಿಸಿದಾಗ, ಶೇಖರ ಕುಕ್ಕೇಡಿ ಅವರೂ ದನಿಗೂಡಿಸಿ ಡಿಸಿಮನ್ನಾ ಜಾಗ ಯಾರಿಗೂ ಕೊಡಲು ಬರುವುದಿಲ್ಲ. ಇದು ಆಗಬಾರದು ಎಂದರು.


ಸರಕಾರಿ ಬಸ್‌ಗಳ ಪಾಸ್ ಇನ್ನೂ ವಿತರಣೆಯಾಗುತ್ತಿಲ್ಲ. ಮಾಲಾಡಿ, ಪಣಕಜೆ, ಮದ್ದಡ್ಕ ಮೊದಲಾದೆಡೆ ಬಸ್ ನಿಲ್ದಾಣಗಳಲ್ಲಿ ಶೆಟ್ಲ್ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಜೋಯೆಲ್ ಮೆಂಡೋನ್ಸಾ ಹೇಳಿದರೆ, ಉಜಿರೆ ಕೆಎಸ್ಸಾರ್ಟಿಸಿಗೆ ಮಂಜೂರಾದ ಜಾಗ ರದ್ದಾಗಿದೆ. ಅದನ್ನು ಉಜಿರೆ ಪಂಚಾಯತ್ ವ್ಯಾಪ್ತಿಯಲ್ಲಿನ ಮನೆ ರಹಿತರಿಗೆ ನೀಡಬಹುದಲ್ಲ ಎಂದು ಶಶಿಧರ್ ಪ್ರಶ್ನಿಸಿದರು.ಈ ಬಗ್ಗೆ ಶಾಸಕರು ಸಂಬಂಧಪಟ್ಟವರಿಗೆ ಫೋನಾಯಿಸಿ ಮಾಹಿತಿ ಪಡೆದುಕೊಂಡರು.

ತಾಲೂಕಿನಲ್ಲಿ ಲೋಕೋಪಯೋಗಿ ಹಾಗೂ ಜಿ.ಪಂ.ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಚರಂಡಿಗಳ ಸ್ವಚ್ಛತೆ ಮಾಡದಿರುವುದರಿಂದ ನಾನಾ ರೋಗಕ್ಕೆ ಕಾರಣವಾಗುತ್ತಿರುವ ಬಗ್ಗೆ ಸಮುದಾಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಸಮಯಕ್ಕೆ ಸರಿಯಾಗಿ ಆಗದಿರುವ ಬಗ್ಗೆ ಗಮನ ಸೆಳೆಯಲಾಯಿತು. ನಿಯೋಜಿತ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿರಬೇಕು ಎಂದು ಶಾಸಕರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಆಯಾ ಇಲಾಖೆಯ ಆಸ್ತಿಗಳಲ್ಲಿನ ಸ್ವಚ್ಛತೆಯನ್ನು ಇಲಾಖಾ ಸಿಬ್ಬಂದಿ ನೋಡಿಕೊಳ್ಳುವಂತೆ ಹೇಳಿದರು.

ಈ ಬಾರಿ ಮೆಸ್ಕಾಂಗೆ ಕಂಡು ಕೇಳರಿಯದಷ್ಟು ನಷ್ಟವುಂಟಾಗಿದೆ. ಆದರೂ ವಿದ್ಯುತ್ ಸಂಪರ್ಕಗಳನ್ನು ಸರಿದಾರಿಗೆ ತಂದಿದ್ದೇವೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು. ಕುಕ್ಕಳ ಬಸವನಗುಡಿ ಬಳಿ ಪೂಂಜಾಲಕಟ್ಟೆ ಪೊಲೀಸ್ ವಸತಿ ಗೃಹಕ್ಕೆ ಜಾಗ ಕಾದಿರಿಸಲಾಗಿದೆ. ಆದರೆ ಕಾರ್ಯ ಇನ್ನೂ ಆಗಿಲ್ಲದಿರುವ ಬಗ್ಗೆ ಜೊಯೆಲ್ ಮೆಂಡೋನ್ಸಾ ತಿಳಿಸಿದರು.ಶಿಕ್ಷಣ ಕ್ಷೇತ್ರಕ್ಕೆ ಚರ್ಚೆ ಹೊರಳಿದಾಗ ಶಿಕ್ಷಣ ಹಕ್ಕು ಕಾಯ್ದೆಯಿಂದ ಹಲವಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇನ್ನೂ ಅಂತರ್ಜಾಲದಲ್ಲಿ ಹೆಸರು ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ ಎಂದು ಸದಸ್ಯರು ಹೇಳಿದಾಗ ಸಂಬಂಧಪಟ್ಟ ಅಧಿಕಾರಿಗಳು 250 ವಿದ್ಯಾರ್ಥಿಗಳು ಆರ್‌ಟಿಇಗೆ ಅರ್ಜಿ ಹಾಕಿದ್ದಾರೆ. ಇದೀಗ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇನ್ನು ಮುಂದಕ್ಕೂ ಎರಡನೆ, ಮೂರನೆ ಪಟ್ಟಿ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ ಎಂದರು.

ಸದಸ್ಯರು ಸರಕಾರಿ ಶಾಲಾ, ಕಾಲೇಜುಗಳಲ್ಲಿ ಶೌಚಾಲಯಗಳ ಅವ್ಯವಸ್ಥೆಯ ಬಗ್ಗೆ ತಿಳಿಸಿದಾಗ ಶಾಸಕರು ಸದಸ್ಯರ ವ್ಯಾಪ್ತಿಯಲ್ಲಿ ಬರುವಂತಹ ಶೌಚಾಲಯಗಳ ಬಗ್ಗೆ ಪಟ್ಟಿ ನೀಡಿ ಕೂಡಲೇಕ್ರಮ ಕೈಗೊಳ್ಳುತ್ತೇನೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ವೇದಾವತಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ, ವಿವಿಧ ಇಲಾಖಾಧಿಕಾರಿಗಳು, ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News