ಬ್ರೆಝಿಲ್ ಫುಟ್ಬಾಲ್ ಕೋಚ್ ಡುಂಗಾ ಉಚ್ಚಾಟನೆ
ಕೋಪಾ ಅಮೆರಿಕ ಟೂರ್ನಿಯಲ್ಲಿನ ಕಳಪೆ ಪ್ರದರ್ಶನಕ್ಕೆ ‘ತಲೆ ದಂಡ’
ರಿಯೋ ಡಿ ಜನೈರೊ, ಜು.15: ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ 100ನೆ ಆವೃತ್ತಿಯ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಬ್ರೆಝಿಲ್ ತಂಡ ಗ್ರೂಪ್ ಹಂತದಲ್ಲೇ ಕೂಟದಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ತಂಡದ ಕೋಚ್ ಡುಂಗಾರನ್ನು ಮಂಗಳವಾರ ಉಚ್ಚಾಟಿಸಲಾಗಿದೆ.
ಕೋಪಾ ಅಮೆರಿಕ ಟೂರ್ನಿಯಲ್ಲಿ ಬ್ರೆಝಿಲ್ ಕಳಪೆ ಪ್ರದರ್ಶನ ನೀಡುವ ಕಾರಣ ಡುಂಗಾ ನೇತೃತ್ವದ ಕೋಚಿಂಗ್ ಸಿಬ್ಬಂದಿಯನ್ನು ವಿಸರ್ಜಿಸಲಾಗಿದೆ ಎಂದು ಬ್ರೆಝಿಲ್ ಫುಟ್ಬಾಲ್ ಕಾನ್ಫಡರೇಶನ್(ಸಿಬಿಎಫ್) ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಬ್ರೆಝಿಲ್ ತಂಡ ತನ್ನ ತವರು ಮೈದಾನದಲ್ಲಿ 2014ರಲ್ಲಿ ನಡೆದ ಫಿಫಾ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಜರ್ಮನಿಯ ವಿರುದ್ಧ 7-1 ಗೋಲುಗಳ ಅಂತರದಿಂದ ಸೋತ ಆಘಾತ ದಿಂದ ಇನ್ನೂ ಹೊರ ಬಂದಿಲ್ಲ. ಕೋಪಾ ಅಮೆರಿಕ ಟೂರ್ನಿಯಲ್ಲಿ ಈಕ್ವೆಡಾರ್ ವಿರುದ್ಧ 1-1 ರಿಂದ ಡ್ರಾ ಗೊಳಿಸಿದ್ದ ಬ್ರೆಝಿಲ್ ಎರಡನೆ ಪಂದ್ಯದಲ್ಲಿ ಹೈಟಿ ತಂಡದ ವಿರುದ್ಧ 7-1 ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು. ಸೋಮವಾರ ನಡೆದ ಪೆರು ವಿರುದ್ಧದ ಪಂದ್ಯವನ್ನು ಡ್ರಾಗೊಳಿಸಿದ್ದರೆ ಕ್ವಾರ್ಟರ್ ಫೈನಲ್‌ಗೇರುವ ಅವಕಾಶವಿತ್ತು. ಆದರೆ, ಚಿಲಿ ತಂಡದ ರಾವುಲ್ ರುಡಿಯಝ್ ಬಾರಿಸಿದ ವಿವಾದಾತ್ಮಕ ಗೋಲಿನಿಂದಾಗಿ ಬ್ರೆಝಿಲ್ 1-0 ಅಂತರದಿಂದ ಸೋತು ಟೂರ್ನಿಯಿಂದಲೇ ಹೊರನಡೆದಿತ್ತು.
ಬ್ರೆಝಿಲ್ ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿ ಕೋಪಾ ಅಮೆರಿಕ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರ ನಡೆದಿದೆ. 52ರ ಹರೆಯದ ಡುಂಗಾ ಬ್ರೆಝಿಲ್‌ನ ಆಟಗಾರನಾಗಿ ಎರಡು ಬಾರಿ ಕೋಪಾ ಅಮೆರಿಕ ಟ್ರೋಫಿಯನ್ನು ಹಾಗೂ ನಾಯಕನಾಗಿ 1994ರಲ್ಲಿ ವಿಶ್ವಕಪ್‌ನ್ನು ಜಯಿಸಿದ್ದರು. 2006 ರಿಂದ 2010ರ ತನಕ ಬ್ರೆಝಿಲ್‌ನ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಡುಂಗಾ 2014ರಲ್ಲಿ ಲೂಯಿಸ್ ಫಿಲಿಪ್‌ರಿಂದ ತೆರವಾಗಿದ್ದ ಹುದ್ದೆಗೆ ಆಯ್ಕೆಯಾಗಿದ್ದರು. ಎರಡನೆ ಬಾರಿ ಕೋಚ್ ಆಗಿ ಡುಂಗಾ ಭಾರೀ ನಿರಾಸೆ ಮೂಡಿಸಿದ್ದರು.