×
Ad

ಯುರೋ ಕಪ್: ‘ಐಸ್’ಲೆಂಡ್‌ಗೆ ಕರಗಿದ ಪೋರ್ಚುಗಲ್

Update: 2016-06-15 11:01 IST

ರೊನಾಲ್ಡೊ ತಂಡದ ವಿರುದ್ಧ ಡ್ರಾ ಸಾಧಿಸಿದ ಫುಟ್ಬಾಲ್ ಶಿಶು

ಪ್ಯಾರಿಸ್, ಜೂ.15: ಯುರೋಪಿಯನ್ ಚಾಂಪಿಯನ್‌ಶಿಪ್‌ನ ‘ಎಫ್’ ಗುಂಪಿನ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನಾಯಕತ್ವದ ಪೋರ್ಚುಗಲ್‌ನ ವಿರುದ್ಧ ‘ಫುಟ್ಬಾಲ್ ಶಿಶು’ ಐಸ್‌ಲೆಂಡ್ ತಂಡ 1-1 ಗೋಲುಗಳ ಅಂತರದಿಂದ ಡ್ರಾ ಸಾಧಿಸಲು ಸಮರ್ಥವಾಗಿದೆ.

ಮಂಗಳವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ 31ನೆ ನಿಮಿಷದಲ್ಲಿ ಪೋರ್ಚುಗಲ್ 1-0 ಮುನ್ನಡೆ ಸಾಧಿಸಿತ್ತು. ನಾನಿ ಪೋರ್ಚುಗಲ್‌ಗೆ ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ, ಟೂರ್ನಿಯಲ್ಲಿ ಚೊಚ್ಚಲ ಪಂದ್ಯವನ್ನು ಆಡುತ್ತಿರುವ ಐಸ್‌ಲೆಂಡ್‌ನ ಮಿಡ್‌ಫೀಲ್ಡರ್ ಬಿರ್ಕಿರ್ ಜಾರ್ನಸನ್ 50ನೆ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

ಐಸ್‌ಲೆಂಡ್ 330,000 ಜನಸಂಖ್ಯೆ ಹೊಂದಿರುವ ಉತ್ತರ ಅಟ್ಲಾಂಟಿಕದ ದ್ವೀಪ ರಾಷ್ಟ್ರವಾಗಿದ್ದು, ಯುರೋ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅತ್ಯಂತ ಪುಟ್ಟ ರಾಷ್ಟ್ರವಾಗಿದೆ.

ಸ್ಟೇಡಿಯಂನ ಒಂದು ಮೂಲೆಯಲ್ಲಿ ಕೆಲವೇ ಸಂಖ್ಯೆಯಲ್ಲಿದ್ದ ಐಸ್‌ಲೆಂಡ್ ಬೆಂಬಲಿಗರು ಬಿರ್ಕಿರ್ 50ನೆ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು ಸರಿಗಟ್ಟಿದಾಗ ಕುಣಿದು ಕುಪ್ಪಳಿಸಿದರು.

127 ಪಂದ್ಯವನ್ನು ಆಡಿದ ರೊನಾಲ್ಡೊ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿದ ಪೋರ್ಚುಗಲ್ ಲೆಜೆಂಡ್ ಲೂಯಿಸ್ ಫಿಗೊ ದಾಖಲೆಯನ್ನು ಸರಿಗಟ್ಟಿದರು. ರಿಯಲ್ ಮ್ಯಾಡ್ರಿಡ್‌ನ ಫಾರ್ವರ್ಡ್ ಆಟಗಾರ ರೊನಾಲ್ಡೊ ಐಸ್‌ಲೆಂಡ್‌ನ ಡಿಫೆನ್ಸ್ ಹಾಗೂ ಗೋಲ್‌ಕೀಪರ್ ಹ್ಯಾನೆಸ್ ಹಾಲ್ಡೊರ್ಸನ್‌ರನ್ನು ಭೇದಿಸಿ ಗೋಲು ಬಾರಿಸಲು ವಿಫಲರಾದರು.

 ಎಫ್ ಗುಂಪಿನ ಮತ್ತೊಂದು ಪಂದ್ಯದಲ್ಲಿ ಆಸ್ಟ್ರೀಯ ತಂಡ ಹಂಗೇರಿಯ ವಿರುದ್ಧ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿ ಅಚ್ಚರಿ ಮೂಡಿಸಿತು. ಆಸ್ಟ್ರೀಯ 30 ವರ್ಷಗಳ ಬಳಿಕ ಪ್ರಮುಖ ಟೂರ್ನಿಯೊಂದರಲ್ಲಿ ಜಯ ದಾಖಲಿಸಿದೆ. ಪೋರ್ಚುಗಲ್ ಶನಿವಾರ ನಡೆಯಲಿರುವ ತನ್ನ ಎರಡನೆ ಪಂದ್ಯದಲ್ಲಿ ಆಸ್ಟ್ರೀಯ ತಂಡವನ್ನು ಎದುರಿಸಲಿದೆ. ಐಸ್‌ಲೆಂಡ್ ತಂಡ ಎಫ್ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಹಂಗೇರಿಯ ತಂಡವನ್ನು ಎದುರಿಸಲಿದೆ.

ಮುಖ್ಯಾಂಶಗಳು:

*ಪೋರ್ಚುಗಲ್ 2008ರ ಬಳಿಕ ಪ್ರಮುಖ ಟೂರ್ನಿಯಲ್ಲಿ ಆರಂಭಿಕ ಪಂದ್ಯಗಳನ್ನು ಜಯಿಸಿಲ್ಲ

*ರೆನಾಟೊ ಸ್ಯಾಂಚೆಸ್ ಪ್ರಮುಖ ಟೂರ್ನಿಯನ್ನು ಪ್ರತಿನಿಧಿಸಿದ ಪೋರ್ಚುಗಲ್‌ನ ಅತ್ಯಂತ ಕಿರಿಯ ಆಟಗಾರ(18 ವರ್ಷ)ಎನಿಸಿಕೊಂಡಿದ್ದಾರೆ. ಈ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮುರಿದರು. ರೊನಾಲ್ಡೊ 19ನೆ ವರ್ಷದಲ್ಲಿ ಪ್ರಮುಖ ಟೂರ್ನಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News