×
Ad

ಉಪ್ಪಿನಂಗಡಿ: ಸಮುದಾಯ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಆಕ್ರೋಶ

Update: 2016-06-15 13:14 IST

ಉಪ್ಪಿನಂಗಡಿ, ಜೂ.15: ಇಲ್ಲಿನ ಸಮುದಾಯ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ನೀಡುವಲ್ಲಿ ಸರಕಾರ ನಿರ್ಲಕ್ಷ ವಹಿಸಿದ್ದು, ಹಲವು ಕೊರತೆಗಳಿಂದ ಬಳಲುತ್ತಿದೆ. ತಕ್ಷಣವೇ ಅಗತ್ಯ ಸೌಲ್ಯಗಳನ್ನು ಕಲ್ಪಿಸಿಕೊಡದಿದ್ದಲ್ಲಿ ಪಕ್ಷಬೇಧ ಮರೆತು ಉಗ್ರ ಹೋರಾಟ ನಡೆಸುವುದಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ನೇತೃತ್ವದಲ್ಲಿ ಮಂಗಳವಾರ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿದ ಗ್ರಾ.ಪಂ. ಸದಸ್ಯರನ್ನೊಳಗೊಂಡ ನಿಯೋಗ ಅಲ್ಲಿನ ವೈದ್ಯೆ ಡಾ. ಶಶಿಕಲಾರನ್ನು ಮಾತನಾಡಿಸಿ, ಬಳಿಕ ಅಲ್ಲಿಯ ಪ್ರಮುಖ ಕೊರತೆಗಳ ಬಗ್ಗೆ ಮಾಹಿತಿ ಪಡೆದು ಈ ನಿರ್ಧಾರ ತಳೆದಿದೆ.

ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಡೆಂಗ್, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಎಲ್ಲೆಡೆ ಹರಡುತ್ತಿದ್ದು, ಇಲ್ಲಿಗೆ ದಿನವೊಂದಕ್ಕೆ 200ಕ್ಕೂ ಅಧಿಕ ಮಂದಿ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಆಸ್ಪತ್ರೆಯಿರುವುದರಿಂದ ಈ ಭಾಗಗಳಲ್ಲಿ ಅಪಘಾತಗಳು ಸಂಭವಿಸಿದಾಗ ಮೊದಲು ಚಿಕಿತ್ಸೆಗೆಂದು ಗಾಯಾಳುಗಳನ್ನು ಇಲ್ಲಿಗೆ ತರಲಾಗುತ್ತದೆ. ಆದರೆ, ವಾರಕ್ಕೆ ಎರಡು ದಿನ ಪುತ್ತೂರಿನಿಂದ ವೈದ್ಯರೋರ್ವರು ಇಲ್ಲಿಗೆ ಆಗಮಿಸುವುದು ಬಿಟ್ಟರೆ, ಉಳಿದ ದಿನಗಳಲ್ಲಿ ಇಲ್ಲಿ ಒಬ್ಬರೇ ವೈದ್ಯರಿದ್ದು, ಅವರೇ ಇವರೆನ್ನಲ್ಲರನ್ನು ನಿಭಾಯಿಸಬೇಕಲ್ಲದೆ, ಇಲಾಖೆಗಳ ಸಭೆಯಲ್ಲಿಯೂ ಭಾಗವಹಿಸಬೇಕು. ಹಾಗಾಗಿ ಇಲ್ಲಿಗೆ ಚಿಕಿತ್ಸೆಗಾಗಿ ಬರುವ ಹೆಚ್ಚಿನ ರೋಗಿಗಳು ಇಲ್ಲಿ ಸರಿಯಾದ ಚಿಕಿತ್ಸೆ ಲಭ್ಯವಾಗದೆ ವಾಪಸಾಗುವುದೇ ಹೆಚ್ಚು ಎಂದು ದೂರಿದರು.

ಡಿ ಗ್ರೂಪ್ ನೌಕರರು ಇಲ್ಲಿ ಒಬ್ಬರೇ ಇರುವುದರಿಂದ ಆಸ್ಪತ್ರೆಯ ಸ್ವಚ್ಛತೆಗೂ ಧಕ್ಕೆಯಾಗಿದೆ. ಇಲ್ಲಿ ಲ್ಯಾಬ್ ಟೆಕ್ನೀಷಿಯನ್ಸ್ ಕೂಡಾ ಇಲ್ಲ. ಈಗ ನೆಲ್ಯಾಡಿ ಹಾಗೂ ಕೊಯಿಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನೀಷಿಯನ್‌ಗಳು ದಿನಕ್ಕೊಬ್ಬರಂತೆ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸುವಂತಾಗಿದೆ. ರಕ್ತ ಕಣ ಪರೀಕ್ಷೆಗೂ ಸೂಕ್ತ ಯಂತ್ರವಿಲ್ಲ. ಎಕ್ಸ್‌ರೇ ಯಂತ್ರವಿದ್ದರೂ ಅದನ್ನಿಡಲು ಕಟ್ಟಡದ ವ್ಯವಸ್ಥೆಯಿಲ್ಲದಿರುವುದರಿಂದ ಈ ಯಂತ್ರ ಉಪಯೋಗಶೂನ್ಯವಾಗಿದೆ. ಹೀಗೆ ಹತ್ತು ಹಲವು ಕೊರತೆಗಳಿಂದ ಉಪ್ಪಿನಂಗಡಿಯ ಸಮುದಾಯ ಆಸ್ಪತ್ರೆಯು ಬಳಲುತ್ತಿದ್ದು, ಇದರಿಂದ ಇಲ್ಲಿಗೆ ಚಿಕಿತ್ಸೆಗಾಗಿ ಬರುವವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖವಾಗಿ ಇಲ್ಲಿ 24 ಗಂಟೆಯ ಕರ್ತವ್ಯಾವಧಿಗೆ ತಕ್ಷಣವೇ ವೈದ್ಯರ ನೇಮಕ ಮಾಡಬೇಕು ಸೇರಿದಂತೆ ಇನ್ನುಳಿದ ಅಗತ್ಯ ಸೌಲಭ್ಯವನ್ನು ತಕ್ಷಣವೇ ಈಡೇರಿಸಬೇಕು. ಈ ಬಗ್ಗೆ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಹಾಗೂ ಶಾಸಕರಿಗೆ ಮನವಿ ನೀಡಿ ತಕ್ಷಣವೇ ಇಲ್ಲಿರುವ ಕೊರತೆ ಹಾಗೂ ಸಮಸ್ಯೆಯನ್ನು ನೀಗಿಸುವಂತೆ ಮನವಿ ಮಾಡಲಾಗುವುದು. ಸರಕಾರದಿಂದ ಇದು ಸಾಧ್ಯವಾಗದಿದ್ದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಬೇಧ ಮರೆತು ಉಗ್ರ ಹೋರಾಟ ರೂಪಿಸಲು ಪಂಚಾಯತ್ ಸದಸ್ಯರು ತೀರ್ಮಾನಿಸಿದ್ದು, ಇದಕ್ಕಾಗಿ ಉಪ್ಪಿನಂಗಡಿ ಬಂದ್ ನಡೆದರೂ ಚಿಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಅಲ್ಲದೇ, ಈ ಸಂದರ್ಭ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ.,ತನ್ನ ಸ್ವಂತ ಖರ್ಚಿನಲ್ಲಿ ಎಕ್ಸ್‌ರೇ ಯಂತ್ರವನ್ನಿಡಲು ತಾತ್ಕಾಲಿಕ ಕಟ್ಟಡವೊಂದನ್ನು ನಿರ್ಮಿಸಿಕೊಡುವುದಾಗಿ ಘೋಷಿಸಿದರೆ, ಪಂಚಾಯತ್ ಸದಸ್ಯ ಸುನೀಲ್ ದಡ್ಡು, ತನ್ನ ಸ್ವಂತ ಖರ್ಚಿನಲ್ಲಿ ಇದಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ವಯರಿಂಗ್ ಕೆಲಸ ನಡೆಸುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ಉಪ್ಪಿನಂಗಡಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಲೇರಿಯಾ ಮಾಸಾಚರಣ ಸಭೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನಿವೃತ ಹಿರಿಯ ಆರೋಗ್ಯ ನಿರೀಕ್ಷಕ ಅಗಸ್ಟಿನ್ ಡಿಸೋಜಾ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾಗ, ಗ್ರಾಮ ಪಂಚಾಯತ್ ಸದಸ್ಯರು ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿಯ ಬಳಿ ಆಸ್ಪತ್ರೆಯಲ್ಲಿ ಬ್ಲೀಚಿಂಗ್ ಪೌಡರ್ ಸೇರಿದಂತೆ ಇನ್ನಿತರ ದಾಸ್ತಾನುಗಳ ಬಗ್ಗೆ ಮಾಹಿತಿ ಕೇಳಿದಾಗ, ಬ್ಲೀಚಿಂಗ್ ಪೌಡರ್ ದಾಸ್ತಾನು ಇಲ್ಲದಿರುವುದು ಸೇರಿದಂತೆ ಹಲವು ಕೊರತೆಗಳು ಇರುವುದು ಗೋಚರವಾಯಿತು. ಇದಕ್ಕೆ ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪಂಚಾಯತ್ ಸದಸ್ಯರು ಕಾಟಾಚಾರಕ್ಕೆ ಸಭೆ ನಡೆಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಂಡದಲ್ಲಿ ಪಂಚಾಯತ್ ಸದಸ್ಯರಾದ ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಸುನೀಲ್ ದಡ್ಡು ಹಾಗೂ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಾಫ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News