ಪ್ರತಿದಿನ 30,000 ಜನರ ಹಸಿವು ತಣಿಸುತ್ತದೆ ದಿಲ್ಲಿಯ ಗುರುದ್ವಾರದ ಲಂಗರ್
ಉಚಿತವಾಗಿ ಊಟ ಸಿಗುವುದಿಲ್ಲ ಎಂದೇ ಹೇಳಲಾಗುತ್ತದೆ. ಆದರೆ ಗುರುದ್ವಾರಗಳಲ್ಲಿ ಆಹಾರ ಉಚಿತವಾಗಿ ಸಿಗುತ್ತದೆ. ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಾಂಗ್ಲಾ ಸಾಹಿಬ್ ಗುರುದ್ವಾರ ವಾರದ ದಿನಗಳಲ್ಲಿ ಸುಮಾರು 25,000-30,000 ಮಂದಿಗೆ ಆಹಾರ ಒದಗಿಸುತ್ತದೆ. ವಾರಂತ್ಯಗಳಲ್ಲಿ ಇಲ್ಲಿಗೆ ಬರುವ ಜನರ ಸಂಖ್ಯೆ 45,000 ಮೀರುತ್ತದೆ. ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಎರಡೂ ದಿನವೂ ಇಲ್ಲಿ ಸಿಗುತ್ತದೆ. ಈ ಎರಡು ಊಟಗಳಿಗೆ ನಮ್ಮ ಬಾಗಿಲಿಗೆ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದು ಬಾಂಗ್ಲಾ ಸಾಹಿಬ್ ಗುರುದ್ವಾರದ ಮಾಹಿತಿ ಅಧಿಕಾರಿ ಹರ್ಪಾಲ್ ಸಿಂಗ್ ಹೇಳುತ್ತಾರೆ. ಮಧ್ಯಾಹ್ನದ ಊಟ 12 ಗಂಟೆಗೆ ಆರಂಭವಾಗಿ 4.30ರ ವರೆಗೆ ಇರುತ್ತದೆ. ರಾತ್ರಿಯೂಟ 7ರಿಂದ 11 ಗಂಟೆಯವರೆಗೂ ಇರುತ್ತದೆ. ಆದರೆ ಈ ಸಮಯದಲ್ಲಿ ಯಾರೇ ಬಂದರೂ ಆಹಾರ ಇಲ್ಲ ಎಂದು ಹೇಳುವುದಿಲ್ಲ. ದೇವರ ಅಡುಗೆಮನೆ ಎನ್ನುವ ಸಣ್ಣ ಕೋಣೆ ಇಲ್ಲಿದೆ. ಇಲ್ಲೇ ಆಹಾರ ನೀಡಲಾಗುತ್ತದೆ. ಪ್ರತೀ ದಿನ 700 ಕಿಲೋ ಬೇಳೆ, 250-300 ಕಿಲೋ ಅಕ್ಕಿ, 1000 ಕಿಲೋ ತರಕಾರಿಗಳು ಮತ್ತು 80,000- 1ಲಕ್ಷ ರೋಟಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಎರಡು ದೊಡ್ಡ ಕಬ್ಬಿಣದ ಕಡಾಯಿಗಳಲ್ಲಿ 500 ಕಿಲೋಗಳಷ್ಟು ಪಲ್ಯ ಮತ್ತು 300 ಕಿಲೋ ಅನ್ನ ತಯಾರಾಗುತ್ತದೆ. ಆರು ತಾಮ್ರದ ಪಾತ್ರೆಗಳಲ್ಲಿ 150 ಕಿಲೋ ಬೇಳೆ ಬೇಯುತ್ತದೆ ಎಂದು ಅಡುಗೆಯಾತ ಬಲ್ವೀರ್ ಸಿಂಗ್ ಹೇಳುತ್ತಾರೆ.
ಒಂದು ಗಂಟೆಯಲ್ಲಿ 200 ರೋಟಿ ತಯಾರಿಸುವ ಯಂತ್ರವೂ ಇಲ್ಲಿದೆ. ನಾವು ಎಲ್ಲಕ್ಕೂ ಯಂತ್ರ ಬಳಸಬಹುದು. ಆದರೆ ಅದು ನಮ್ಮ ಸಿಖ್ ಧರ್ಮದ ಮೂಲವಾದ ಸೇವೆಯ ಉದ್ದೇಶಕ್ಕೇ ತಡೆಯೊಡ್ಡುತ್ತದೆ ಎನ್ನುತ್ತಾರೆ ಸಿಂಗ್. ಅಡುಗೆ ಮನೆಗೆ ಯಾರೇ ಬೇಕಾದರೂ ಹೋಗಬಹುದು. ಮುಖ್ಯವಾಗಿ ಸ್ವಯಂ ಸೇವಕರೇ ಗುರುದ್ವಾರದ ಸಿಬ್ಬಂದಿಗಿಂತ ಹೆಚ್ಚು ಕೆಲಸ ಮಾಡಿ ಅಡುಗೆ ತಯಾರಿಸುತ್ತಾರೆ. ಸ್ವಚ್ಛ ಕೈಗಳಲ್ಲಿ ಸೇವೆ ಸಲ್ಲಿಸಬೇಕೆನ್ನುವ ನಿಯಮ ಪಾಲಿಸಿದರೆ ಸಾಕು. ನೈರ್ಮಲ್ಯಕ್ಕೆ ಇಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ. ನಂಬಲು ಅಸಾಧ್ಯವೆನಿಸುವಂತೆ ಈ ಅಡುಗೆಮನೆ ಜನರ ದಾನ ಧರ್ಮಗಳಿಂದಲೇ ನಡೆಯುತ್ತದೆ. ಗುರುದ್ವಾರದ ರಾಕಬ್ ಗಂಜ್ ಸಾಹಿಬ್ ಮುಖ್ಯ ಕಚೇರಿಯಿಂದಲೇ ವಾರದ ಸರಕುಗಳು ಬರುತ್ತವೆ ಎನ್ನುತ್ತಾರೆ ಸಿಂಗ್. ಆಹಾರ ಸರಳವಾಗಿರುತ್ತದೆ. ಒಟ್ಟಾರೆ ಅದನ್ನು ಮಾಡುವ ಮಂದಿಗೆ ಪ್ರೇರಣೆ ನೀಡುವಂತಿದೆ. ಆಹಾರದ ತಟ್ಟೆಯಲ್ಲಿ ಬೇಳೆ ಸಾರು, ಅನ್ನ, ಪಲ್ಯ ಮತ್ತು ರೊಟ್ಟಿ ಇರುತ್ತದೆ. ಪ್ರತೀ ಎರಡು ದಿನಕ್ಕೊಮ್ಮೆ ಸಿಹಿತಿನಿಸುಗಳಾಗಿ ಖೀರು ಮತ್ತಿನ್ನೇನಾದರೂ ಇರುತ್ತದೆ. ಇಲ್ಲಿ ಆಹಾರ ತಯಾರಿಸುವವರು ಮತ್ತು ಸೇವಿಸುವವರು ಆತ್ಮತೃಪ್ತಿಯಿಂದ ತೆರಳುತ್ತಾರೆ.
ಕೃಪೆ: http://indiatoday.intoday.in