ಚಾಂಪಿಯನ್ ಚಿಲಿ ವಿರುದ್ಧ ಪನಾಮಾ ಚೆಲ್ಲಾಪಿಲ್ಲಿ
ಫಿಲಡೆಲ್ಫಿಯಾ, ಜೂ.15: ಪನಾಮಾ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಹಾಲಿ ಚಾಂಪಿಯನ್ ಚಿಲಿ ತಂಡ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.
ಮೊದಲಾರ್ಧದಲ್ಲಿ ಎಡ್ವರ್ಡೊ ವರ್ಗಸ್ ಹಾಗೂ ದ್ವಿತೀಯಾರ್ಧದಲ್ಲಿ ಅಲೆಕ್ಸಿಸ್ ಸ್ಯಾಂಚೆಝ್ ಬಾರಿಸಿದ ತಲಾ ಅವಳಿ ಗೋಲು ನೆರವಿನಿಂದ ಚಿಲಿ ತಂಡ ಪನಾಮಾವನ್ನು ಸುಲಭವಾಗಿ ಸೋಲಿಸಿತು. ಚಿಲಿ ಶನಿವಾರ ನಡೆಯಲಿರುವ ಮುಂದಿನ ಸುತ್ತಿನ ಪಂದ್ಯದಲ್ಲಿ ಮೆಕ್ಸಿಕೋವನ್ನು ಎದುರಿಸಲಿದೆ.
5ನೆ ನಿಮಿಷದಲ್ಲಿ ಗೋಲು ಬಾರಿಸಿದ ಮಿಗುಯೆಲ್ ಕಮಾರ್ಗೊ ಪನಾಮಾ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು. 15ನೆ ನಿಮಿಷದಲ್ಲಿ ಗೋಲು ಬಾರಿಸಿದ ಎಡ್ವರ್ಡೊ ವರ್ಗಸ್ ಚಿಲಿ ತಂಡ ತಿರುಗೇಟು ನೀಡಲು ನೆರವಾದರು. 43ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಎಡ್ವರ್ಡ್ ಚಿಲಿ ಮುನ್ನಡೆಯನ್ನು 2-1ಕ್ಕೆ ಏರಿಸಿದರು.
50 ಹಾಗೂ 89ನೆ ನಿಮಿಷದಲ್ಲಿ ಗೋಲು ಬಾರಿಸಿದ ಸ್ಯಾಂಚೆಝ್ ಚಿಲಿಗೆ ಭರ್ಜರಿ ಗೆಲುವು ತಂದುಕೊಡಲು ನೆರವಾದರು. ಚಿಲಿ ಗೋಲ್‌ಕೀಪರ್ ಕ್ಲಾಡಿಯೊ ಬ್ರಾವೊ ಎಸೆಗಿದ ತಪ್ಪಿನ ಲಾಭ ಪಡೆದ ಪನಾಮಾ 75ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಸಮಾಧಾನ ಪಟ್ಟುಕೊಂಡಿತು.
ಅರ್ಜೆಂಟೀನದ ಬಲೆಗೆ ಬಿದ್ದ ಬೊಲಿವಿಯಾ
ಡಿ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನ ತಂಡ ಬೊಲಿವಿಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿತು.
ಅರ್ಜೆಂಟೀನದ ಪರ ಎರಿಕ್ ಲಾಮೆಲಾ(13ನೆ ನಿಮಿಷ), ಲಾವೆಝಿ(15ನೆ ನಿಮಿಷ) ಹಾಗೂ ವಿಕ್ಟರ್ ಕ್ಯೂಯೆಸ್ಟಾ(32ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಕ್ಯೊಯೆಸ್ಟಾ ಮೊದಲ ಅಂತಾರಾಷ್ಟ್ರೀಯ ಗೋಲು ದಾಖಲಿಸಿದರು. ಅರ್ಜೆಂಟೀನ ಮುಂದಿನ ಸುತ್ತಿನಲ್ಲಿ ವೆನೆಝುವೆಲಾ ತಂಡವನ್ನು ಎದುರಿಸಲಿದೆ.