ಮುಸ್ಲಿಂ ವಿರೋಧಿ ಹೇಳಿಕೆ; ಉತ್ತರ ಪ್ರದೇಶದಲ್ಲಿ ಸಾಧ್ವಿ ಪ್ರಾಚಿ ವಿರುದ್ಧ ಎಫ್‌ಐಆರ್
Update: 2016-06-15 14:09 IST
ಉನ್ನಾವೊ, ಜೂ15: ವಿವಾದಾಸ್ಪದ ಹೇಳಿಕೆಗಳನ್ನು ನೀಡುವ ಸಾಧ್ವಿ ಪ್ರಾಚಿ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಹಾನಿಯೆಸಗಿದ ಆರೋಪದಲ್ಲಿ ಜಿಲ್ಲೆಯ ಸದರ್ ಕೋತ್ವಾಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೋತ್ವಾಲಿ ಠಾಣಾಧಿಕಾರಿ ಸಂಜಯ್ ಪಾಂಡ್ಯರ ಪ್ರಕಾರ ಸಾಧ್ವಿ ಪ್ರಾಚಿ ವಿರುದ್ಧ ಬಹುಜನ ಮುಕ್ತಿ ಮೋರ್ಚಾದ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್ ಎಂಬವರು ದೂರು ನೀಡಿದ್ದು, ಸಾಧ್ವಿ ಪ್ರಾಚಿ ಮುಸ್ಲಿಂ ಮುಕ್ತ ಭಾರತ ಮಾಡುವ ಸಮಯ ಆಗಿದೆ ಎಂಬ ಹೇಳಿಕೆ ನೀಡಿದ್ದಾರೆ ಈ ಮೂಲಕ ಸಮಾಜದಲ್ಲಿ ಸಮಾಜದ ಕೋಮು ಭಾವನೆಗಳನ್ನು ಪ್ರಚೋದಿಸಿದ್ದಾರೆ ಎಂದು ವಿವರಿಸಿದ್ದಾರೆ.
ಆದ್ದರಿಂದ ಸಾಧ್ವಿ ವಿರುದ್ಧ ಕಲಂ 153ಯು, 153ಬಿ,117ಎ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಇದು ಉತ್ತರಾಖಂಡದಲ್ಲಿ ನೀಡಿದ ಹೇಳಿಕೆಯ ವಿರುದ್ಧದ ಪ್ರಕರಣವಾಗಿದ್ದು ಮುಂದಿನ ಕ್ರಮ ಕೈಗೊಳ್ಳಲು ಉತ್ತರಾಖಂಡದ ಸಂಬಂಧಿತ ಠಾಣೆಗೆ ಪ್ರಕರಣವನ್ನು ಹಸ್ತಾಂತರಿಸಲಾಗುವುದು ಎಂದು ಠಾಣಾಧಿಕಾರಿ ಸಂಜಯ್ ಪಾಂಡ್ಯ ಹೇಳಿದ್ದಾರೆ.