ಅಡ್ಡ ಮತದಾನ: ಕಾಂಗ್ರೆಸ್‌ನಿಂದ ಆರು ಶಾಸಕರ ವಜಾ
ಹೊಸದಿಲ್ಲಿ, ಜೂನ್ 15: ಕಾಂಗ್ರೆಸ್ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಉತ್ತರ ಪ್ರದೇಶದ ತನ್ನ ಆರು ಶಾಸಕರನ್ನು ಪಾರ್ಟಿಯಿಂದ ಹೊರಹಾಕಿದೆ. ಸಂಜಯ್ ಜೈಸ್ವಾಲ್, ಮಾಧುರಿ ವರ್ಮಾ, ವಿಜಯ್ ದುಬೆ, ಮುಹಮ್ಮದ್ ಮುಸ್ಲಿಮ್, ದಿಲ್‌ನವಾರ್ ಖಾನ್, ಕಾಸಿಮ್ ಅಲಿ ಖಾನ್ ಪಕ್ಷ ವಿಪ್ ಉಲ್ಲಂಘಿಸಿದ ಕಾರಣಕ್ಕಾಗಿ ಪಕ್ಷದಿಂದ ವಜಾಗೊಂಡಿರುವ ಶಾಸಕರು. ಆರು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷಗಳಿಗೆ ಮತ ಹಾಕಿದ್ದಾರೆ. ಮೂವರು ಬಿಜೆಪಿಗೂ ಮೂವರು ಬಹುಜನ ಸಮಾಜ ಪಕ್ಷಕ್ಕೂ ಮತ ಹಾಕಿದ್ದರು.
ಶಾಸಕರನ್ನು ವಜಾಗೊಳಿಸಿದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಝಾದ್ ಹೇಳಿಕೆ ನೀಡಿದ್ದು ಆರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ತಾನು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪಕ್ಷದ ಅಧ್ಯಕ್ಷೆ ಸೋನಿಯಾಜಿಯವರನ್ನು ವಿನಂತಿಸಿದ್ದೆ ಎಂದು ಹೇಳಿದ್ದಾರೆ. ಬಿಜೆಪಿ ಶಾಸಕರ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸಿದೆ ಹರಿಯಾಣದಲ್ಲಿ ನಮ್ಮ ವಿರುದ್ಧ ಪ್ರಯೋಗಿಸಿದ ಅದೇ ಆಟವನ್ನು ಇಲ್ಲಿಯೂ ಪ್ರದರ್ಶಿಸಿದೆ ಎಂದು ಆಝಾದ್ ಕಿಡಿಕಿಡಿಯಾಗಿದ್ದಾರೆ.