ಝಿಂಬಾಬ್ವೆ ವಿರುದ್ಧ ಏಕದಿನ ಸರಣಿ: ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ
ಹರಾರೆ, ಜೂ.15: ಝಿಂಬಾಬ್ವೆ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯವನ್ನು ನಿರೀಕ್ಷೆಯಂತೆಯೇ 10 ವಿಕೆಟ್‌ಗಳ ಅಂತರದಿಂದ ಜಯಿಸಿದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ.
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಸತತ ಮೂರನೆ ಬಾರಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಝಿಂಬಾಬ್ವೆ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ(4-22) ದಾಳಿಗೆ ತತ್ತರಿಸಿ 42.2 ಓವರ್‌ಗಳಲ್ಲಿ ಕೇವಲ 123 ರನ್‌ಗೆ ಆಲೌಟಾಯಿತು.
ಗೆಲ್ಲಲು ಸುಲಭ ಸವಾಲು ಪಡೆದ ಭಾರತ ತಂಡ ಆರಂಭಿಕ ದಾಂಡಿಗರಾದ ಕನ್ನಡಿಗ ಕೆಎಲ್ ರಾಹುಲ್(63 ರನ್, 70 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಫೈಝ್ ಫಝಲ್(ಔಟಾಗದೆ 55 ರನ್, 61 ಎಸೆತ, 7 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ 126 ರನ್ ಸಹಾಯದಿಂದ ಇನ್ನೂ 169 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ರಾಹುಲ್ ಮತ್ತೊಮ್ಮೆ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು. ಸರಣಿಯಲ್ಲಿ ಒಟ್ಟು 196 ರನ್ ಗಳಿಸಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
30ರ ಹರೆಯದ ನಾಗ್ಪುರದ ಫೈಝ್ ಯಾಕುಬ್ ಫಝಲ್ 16 ವರ್ಷಗಳ ಬಳಿಕ ಭಾರತದ ಪರ ಚೊಚ್ಚಲ ಏಕದಿನ ಪಂದ್ಯ ಆಡಿದ ಹಿರಿಯ ಆಟಗಾರ ಎನಿಸಿಕೊಂಡರು. 2000ರ ಜನವರಿಯಲ್ಲಿ ಸಮೀರ್ ಧಿೆ ಚೊಚ್ಚಲ ಏಕದಿನ ಪಂದ್ಯ ಆಡಿದ್ದ ಹಿರಿಯ ಆಟಗಾರನಾಗಿದ್ದರು. ಫಝಲ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕವನ್ನು ಸಿಡಿಸಿ ಗಮನ ಸೆಳೆದಿದ್ದಾರೆ.
ಫಝಲ್ ಭಾರತವನ್ನು ಪ್ರತಿನಿಧಿಸಿದ ವಿದರ್ಭದ 3ನೆ ಆಟಗಾರ ಎನಿಸಿಕೊಂಡರು. ವೇಗದ ಬೌಲರ್‌ಗಳಾದ ಪ್ರಶಾಂತ್ ವೈದ್ಯ ಹಾಗೂ ಉಮೇಶ್ ಯಾದವ್ ಈ ಹಿಂದೆ ಭಾರತವನ್ನು ಪ್ರತಿನಿಧಿಸಿದ್ದರು. ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಧಾರದಲ್ಲಿ ಫಝಲ್ ಕಳೆದ ತಿಂಗಳು ಝಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದರು.
ಬುಧವಾರ ನಾಯಕ ಧೋನಿ ಅವರಿಂದ ಭಾರತದ ಕ್ಯಾಪನ್ನು ಸ್ವೀಕರಿಸಿದ ಎಡಗೈ ಆರಂಭಿಕ ದಾಂಡಿಗ ಫಝಲ್ ಚೊಚ್ಚಲ ಪಂದ್ಯದಲ್ಲೇ ಮಿಂಚುವ ಮೂಲಕ ಶನಿವಾರ ಆರಂಭವಾಗಲಿರುವ ಟ್ವೆಂಟಿ-20 ಸರಣಿಯಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದರು.
ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ ಮೂರನೆ ಪಂದ್ಯವನ್ನು ಜಯಿಸಿ ಝಿಂಬಾಬ್ವೆಗೆ ವೈಟ್‌ವಾಶ್ ಬಳಿದಿದೆ.
ಝಿಂಬಾಬ್ವೆ 123: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ಪರ ವಿಸು ಸಿಬಾಂಡ(38 ರನ್) ಅಗ್ರ ಸ್ಕೋರರ್ ಎನಿಸಿಕೊಂಡರೆ, ಚಿಭಾಭಾ(27) ಹಾಗೂ ಮರುಮಾ(17) ಎರಡಂಕೆಯ ಸ್ಕೋರ್ ದಾಖಲಿಸಿದರು. ಉಳಿದವರು ಪೆವಿಲಿಯನ್‌ಗೆ ಪರೇಡ್ ನಡೆಸಿದರು.
ಝಿಂಬಾಬ್ವೆ ಸರಣಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ 168, 126/9 ಹಾಗೂ 123 ರನ್ ಗಳಿಸಲಷ್ಟೇ ಶಕ್ತವಾಗಿದೆ. 3ನೆ ಏಕದಿನದಲ್ಲಿ ಒಂದು ಹಂತದಲ್ಲಿ 32.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದ್ದ ಝಿಂಬಾಬ್ವೆ ಭಾರತದ ಎಡಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ(4-22) ದಾಳಿಗೆ ತತ್ತರಿಸಿ ಕೇವಲ 6 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಪಿನ್ನರ್ ಯುಝ್ವೇಂದ್ರ ಚಾಹಲ್(2-25) ಎರಡು ವಿಕೆಟ್ ಪಡೆದರು.
ಭಾರತ ತಂಡ ವಿದೇಶಿ ನೆಲದಲ್ಲಿ ಯುವ ಆಟಗಾರರಿಗೆ ಆಡುವ ಅವಕಾಶ ಕಲ್ಪಿಸುವ ಉದ್ದೇಶದಿಂದ ದ್ವಿತೀಯ ದರ್ಜೆಯ ತಂಡವನ್ನು ಝಿಂಬಾಬ್ವೆಗೆ ಕಳುಹಿಸಿಕೊಡುತ್ತಿದೆ.
ಭಾರತದ ಯುವ ಆಟಗಾರರ ವಿರುದ್ಧ ಶರಣಾಗಿರುವ ಝಿಂಬಾಬ್ವೆ ಇನ್ನೂ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಜ್ಜಾಗಿಲ್ಲ ಎಂದು ತೋರಿಸಿಕೊಟ್ಟಿದೆ. ತಂಡದಲ್ಲಿ ಮೂವರು ಆಟಗಾರರು 76ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ಅನುಭವವಿದ್ದರೂ ತಂಡಕ್ಕೆ ಪ್ರಯೋಜನವಾಗಿಲ್ಲ
ಸ್ಕೋರ್ ವಿವರ
ಝಿಂಬಾಬ್ವೆ: 42.2 ಓವರ್‌ಗಳಲ್ಲಿ 123 ರನ್‌ಗೆ ಆಲೌಟ್
ಮಸಕಝ ಸಿ ರಾಹುಲ್ ಬಿ ಕುಲಕರ್ಣಿ 08
ಚಿಭಾಭಾ ಸಿ ಬುಮ್ರಾ ಬಿ ಚಾಹಲ್ 27
ಸಿಬಾಂಡ ಸಿ ಮತ್ತು ಬಿ ಚಾಹಲ್ 38
ಮರುಮಾ ಬಿ ಬುಮ್ರಾ 17
ವಾಲ್ಲರ್ ರನೌಟ್ 08
ಚಿಗುಂಬುರ ಸಿ ಧೋನಿ ಬಿ ಬುಮ್ರಾ 00
ಮುತುಂಬಮಿ ಸಿ ರಾಹುಲ್ ಬಿ ಬುಮ್ರಾ 04
ಕ್ರೀಮರ್ ಎಲ್‌ಬಿಡಬ್ಲು ಪಟೇಲ್ 00
ಮಡ್ಝಿವಾ ಔಟಾಗದೆ 10
ಮುಪರಿವಾ ಸಿ ಪಾಂಡೆ ಬಿ ಬುಮ್ರಾ 01
ತಿರಿಪನೊ ರನೌಟ್ 02
ಇತರ 08
ವಿಕೆಟ್ ಪತನ: 1-19, 2-55, 3-89, 4-104, 5-104, 6-104, 7-104, 8-108, 9-110
ಬೌಲಿಂಗ್ ವಿವರ:
ಸ್ರಾನ್ 8-0-40-0
ಧವಳ್ ಕುಲಕರ್ಣಿ 6.2-1-17-1
ಬುಮ್ರಾ 10-1-22-4
ಅಕ್ಷರ್ ಪಟೇಲ್ 10-2-16-1
ಯುಝ್ವೇಂದ್ರ ಚಾಹಲ್ 8-0-25-2
ಭಾರತ: 21.5 ಓವರ್‌ಗಳಲ್ಲಿ 126/0
ಕೆಎಲ್ ರಾಹುಲ್ ಔಟಾಗದೆ 63
ಫೈಝ್ ಫಝಲ್ ಔಟಾಗದೆ 55
ಇತರ 08
ಬೌಲಿಂಗ್ ವಿವರ:
ತಿರಿಪಾನೊ 5-1-15-0
ಮಡ್ಝಿವಾ 5-0-25-0
ಮುಪರಿವಾ 6-0-43-0
ಕ್ರೀಮರ್ 4-0-26-0
ಚಿಭಾಭಾ 1.5-0-15-0.
ಪಂದ್ಯಶ್ರೇಷ್ಠ: ಕೆಎಲ್ ರಾಹುಲ್
ಸರಣಿಶ್ರೇಷ್ಠ: ಕೆಎಲ್ ರಾಹುಲ್