×
Ad

ಬೆಳ್ತಂಗಡಿ: ಸಮುದಾಯ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಸದಸ್ಯರ ಆಕ್ರೋಶ

Update: 2016-06-15 18:34 IST

ಬೆಳ್ತಂಗಡಿ, ಜೂ.15: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕಾನಿಂಗ್ ಸೌಲಭ್ಯ ಮಂಜೂರುಗೊಂಡರೂ ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ. ಆಸ್ಪತ್ರೆಗೆ ಮಂಜೂರಾಗಿರುವ ವಾಷಿಂಗ್ ಮೆಷಿನ್ ಮೂಲೆ ಸೇರಿದೆ. ಇದು ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಿರುವ ಬಗ್ಗೆ ಬೆಳ್ತಂಗಡಿ ನಗರ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು.

ನಗರ ಪಂಚಾಯತ್‌ನ ಸಾಮಾನ್ಯ ಸಭೆಯು ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ರ ಅಧ್ಯಕ್ಷತೆಯಲ್ಲಿ ಬುಧವಾರ ನಗರ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷ ಜಗದೀಶ್ ಈ ವಿಚಾರ ಪ್ರಸ್ತಾಪಿಸಿದರು. ಇದಕ್ಕುತ್ತರಿಸಿದ ವೈದ್ಯಾಧಿಕಾರಿ ಡಾ. ಆದಂ, ಸ್ಕ್ಯಾನಿಂಗ್ ಆರಂಭಿಸಲು ಪರವಾನಿಗೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮೋದನೆ ಸಿಕ್ಕಿದ ಕೂಡಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಸಮುದಾಯ ಆಸ್ಪತ್ರೆಗೆ ಬೆಡ್‌ಶೀಟ್ ಸ್ವಚ್ಛಗೊಳಿಸಲು ಪೆಟ್ರೋನೆಟ್ ಕಂಪೆನಿಯವರು ಸುಮಾರು 8.5 ಲಕ್ಷ ವೆಚ್ಚದ ವಾಷಿಂಗ್ ಮೆಷಿನ್ ನೀಡಿದ್ದು ಆದರೆ ಇದಕ್ಕೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಇದು ಉಪಯೋಗವಾಗುತ್ತಿಲ್ಲ ಎಂದು ಡಾ.ಆದಂ ಮಾಹಿತಿ ನೀಡಿದರು.

ಈ ಬಗ್ಗೆ ಸಬೆಯಲ್ಲಿ ಚರ್ಚೆ ನಡೆದು ಮೆಸ್ಕಾಂ ಇಂಜಿನಿಯರ್ ಬಳಿ ಮಾಹಿತಿ ಕೇಳಿದಾಗ ಇದಕ್ಕೆ ಮೆಸ್ಕಾಂ ಠೇವಣಾತಿ ಹಾಗೂ ಇತರ ಖರ್ಚಿನಂತೆ ಸುಮಾರು 3.5 ಲಕ್ಷ ವೆಚ್ಚ ತಗಲಲಿದೆ ಎಂದರು. ಇದಕ್ಕೆ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪಂಚಾಯತ್ ವತಿಯಿಂದ ನೀಡಲಾಗುವುದು ಸಮುದಾಯ ಆರೋಗ್ಯ ಸಮಿತಿ ಹಾಗೂ ಮೆಸ್ಕಾಂನವರು ಸೂಕ್ತ ಸ್ಪಂದಿಸಿ ಸಾರ್ವಜನಿಕರಿಗೆ ಸೌಲಭ್ಯ ಸಿಗುವ ಹಾಗೆ ಮಾಡಬೇಕು ಎಂದು ಮನವಿ ಮಾಡಿದರು.

ನಗರದಲ್ಲಿ ಡೆಂಗ್ ಜ್ವರದ ಲಕ್ಷಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಮುದಾಯ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ರಕ್ತ ಪರೀಕ್ಷೆಯ ಸೌಲಭ್ಯವನ್ನು ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಆದಂ ಡೆಂಗ್ ಮಾಹಿತಿ ನೀಡಿ ಎಲ್ಲಾ ಕಡೆಯಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ನಗರ ಪಂಚಾಯತ್ ಸಹಕರಿಸಬೇಕು ಎಂದು ಮನವಿ ಮಾಡಿದರು. ಇದಕ್ಕುತ್ತರಿಸಿದ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ನಗರದಾದ್ಯಂತ ಡೆಂಗ್ ಬಗ್ಗೆ ಕರಪತ್ರ ಹಂಚಲಾಗುತ್ತಿದೆ. ಅಲ್ಲದೆ ಚರಂಡಿ ಹೂಳೆತ್ತುವುದು, ಹೋಟೆಲ್, ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ಕಸ ವಿಲೇವಾರಿ ವಾಹನಕ್ಕೆ ಕಡ್ಡಾಯವಾಗಿ ಕೊಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳ್ತಂಗಡಿ ಸಮುದಾಯ ಆಸ್ಪತ್ರೆಗೆ ನಗರ ಪಂಚಾಯತ್ ವತಿಯಿಂದ 50 ಸೊಳ್ಳೆ ಪರದೆಗಳನ್ನು ನೀಡಲಾಗುವುದು ಎಂದು ಮುಗುಳಿ ನಾರಾಯಣ ರಾವ್ ತಿಳಿಸಿದರು. ಮೆಸ್ಕಾಂನ ಇಂಜಿನಿಯರ್ ಶಿವಶಂಕರ್ ಇಲಾಖಾ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಸದಸ್ಯ ಲ್ಯಾನ್ಸಿ ಪಿರೇರಾ ಮಾತನಾಡಿ ರಸ್ತೆ ಬದಿಗಳಲ್ಲಿ ಮರಗಳನ್ನು ಬೆಳೆಸುತ್ತಿದ್ದು ಕೆಲವು ಮರಗಳ ರೆಂಬೆಗಳು ವಿದ್ಯುತ್ ತಂತಿಗೆ ತಾಗುತ್ತಿದೆ. ಅದನ್ನು ಮೆಸ್ಕಾಂ ಮುಂಜಾಗರೂಕತೆಯಾಗಿ ಕಡಿಯುವುದು ಸಹಜ. ಆದರೆ ಮರದ ಎಲ್ಲಾ ರೆಂಬೆಗಳನ್ನು ಕಡಿದು ಹಾಕುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಿಂದಿನ ಸಭೆಯ ನಡವಳಿಗೆ ಅನುಮೋದನೆ, 2016ರ ಎಪ್ರಿಲ್ ತಿಂಗಳ ಜಮಾ ಖರ್ಚು ಪರಿಶೀಲನೆ ಮಂಜೂರು, ಟೆಂಡರ್ ಕೊಟೇಷನ್ ಏಲಂಗಳನ್ನು ಪರಿಶೀಲಿಸಿ ಮಂಜೂರುಗೊಳಿಸಲಾಯಿತು. 2016-17ನೆ ಎಸ್‌ಎಫ್‌ಸಿ ಪ್ರೋತ್ಸಾಹ ನಿಧಿಗೆ ಕ್ರಿಯಾ ಯೋಜನೆ ತಯಾರಿ, 2016-17ನೆ ಸಾಲಿನ 14ನೆ ಹಣಕಾಸು ಯೋಜನೆಗೆ ಕ್ರಿಯಾ ಯೋಜನೆ ತಯಾರಿ, ಎಸ್‌ಎಪ್‌ಸಿ ವಿಶೇಷ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿ, ಪಟ್ಟಣ ವ್ಯಾಪ್ತಿಯ ಗುರುವಾಯನಕೆರೆ ಬಂಟರ ಭವನದಿಂದ ಸೇತುವೆವರೆಗೆ ಎರಡೂ ಕಡೆ ಚರಂಡಿ ಹೂಳೆತ್ತುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ ಅರಿಗ, ಶಹರೀ ರೋಜ್ಗಾರ್ ಯೋಜನೆಯ ಯೋಜನಾಧಿಕಾರಿ ವೆಂಕಟರಮಣ ಶರ್ಮ, ಆಹಾರ ನಿರೀಕ್ಷಕ ಮಂಜಪ್ಪ ಸಪಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News