×
Ad

ನೆಕ್ಕಿಲಾಡಿ: ದುರಸ್ತಿ ಭಾಗ್ಯ ಕಾಣದ ಪಂಪ್ ಹೌಸ್-ಬಸವನಗುಡಿ ರಸ್ತೆ

Update: 2016-06-15 19:02 IST

ಮಂಗಳೂರು, ಜೂ.15:ಪುತ್ತೂರು ತಾಲೂಕಿನ 34ನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್‌ನ ಪಂಪ್ ಹೌಸ್‌ನಿಂದ ಬಸವನಗುಡಿವರೆಗಿನ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದುವರೆಗೂ ದುರಸ್ತಿ ಕಂಡಿಲ್ಲ.

ಈ ಬಾರಿಯ ಮಳೆಗಾಲ ಆರಂಭದಿಂದಲೂ ಗುಂಡಿ ತುಂಬಿದ ರಸ್ತೆಯಲ್ಲಿ ನೀರು ಹರಿದು ಹೋಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಎರಡು ವರ್ಷಗಳ ಹಿಂದೆ ಸರಕಾರದ ಜನಸ್ನೇಹಿ ಕಾರ್ಯಕ್ರಮದಲ್ಲಿ ಜನರಿಂದ ಸ್ವೀಕರಿಸಲಾದ ಮನವಿಗಳಲ್ಲಿ ಹಲವು ಕಾಮಗಾರಿಗಳಿಗೆ ಇನ್ನೂ ಅನುದಾನ ಬಿಡುಗಡೆಯಾಗದೆ ನೆನೆ ಗುದಿಗೆ ಬಿದ್ದಿವೆ. ಈ ಪೈಕಿ ಬಸವನ ಗುಡಿ ರಸ್ತೆ ಕಾಮಗಾರಿಯೂ ಒಂದು.

ಉಪ್ಪಿನಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ಜನ ಸ್ನೇಹಿ ಕಾರ್ಯಕ್ರಮ ನಡೆದಿತ್ತು. ಈ ಸಭೆಯಲ್ಲಿ ನೆಕ್ಕಿಲಾಡಿ ಗ್ರಾಮಪಂಚಾಯತ್‌ನ ಬಸವನ ಗುಡಿ ಪ್ರದೇಶದ ಗ್ರಾಮಸ್ಥರು ಮಳೆಯಿಂದಾಗಿ ನಮ್ಮ ಊರಿನ ಪ್ರಮುಖ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ಬಗ್ಗೆ ತುರ್ತು ಗಮನಹರಿಸಿ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಜಿಲ್ಲಾ ಪಂಚಾಯತ್‌ನ ಅಧಿಕಾರಿಗಳು, ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಕಚೇರಿಗೆ ಕಳುಹಿಸಿದ್ದರು.

ಈ ವರದಿಯನ್ನು ಪರಿಶೀಲಿಸಿ ಮೇಲ್ಕಂಡ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾಗುವ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿಲ್ಲಾ ಪಂಚಾಯತ್‌ನ ಅಧಿಕಾರಿಗಳಿಗೆ 2014ರ ಜುಲೈ 28ರಂದು ಪತ್ರ ಬರೆದಿದ್ದರು. ಈ ಪತ್ರದಲ್ಲಿ ಒಟ್ಟು 27 ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿದ್ದು ಈ ಪೈಕಿ ಏಳು ಕಾಮಗಾರಿಗಳು ಪೂರ್ಣಗೊಂಡಿದ್ದು, ಸುಮಾರು 3 ಕಾಮಗಾರಿಗಳು ಭಾಗಶ: ಪೂರ್ಣಗೊಂಡಿದ್ದರೆ ಉಳಿದಂತೆ ಸುಮಾರು 17 ಕಾಮಗಾರಿಗಳು ಯಾವುದೇ ಕ್ರಮಗಳಿಲ್ಲದೆ ಬಾಕಿ ಉಳಿದಿವೆ.

ಈ ಪಟ್ಟಿಯಲ್ಲಿ ಬಸವನಗುಡಿ -ಪಂಪ್‌ಹೌಸ್ ಕಾಮಗಾರಿ ಅಭಿವೃದ್ಧಿ ಹಾಗೂ ಕಾಂಕ್ರಿಟೀಕರಣ ಕಾಮಗಾರಿಯೂ ಸೇರಿದೆ. ಜಿಲ್ಲಾ ಪಂಚಾಯತ್‌ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಒಂದು ವರ್ಷದ ಹಿಂದೆ ಕಳುಹಿಸಿದ ಪ್ರಸ್ತಾವನೆಯ ಪ್ರಕಾರ ಸುಮಾರು 35ಲಕ್ಷ ರೂ. ಅಂದಾಜು ವೆಚ್ಚವಾಗಬಹುದು ಎಂದು ತಿಳಿಸಿದ್ದಾರೆ. ಆದರೆ ಇದುವರೆಗೆ ಈ ಗ್ರಾಮ ಸ್ನೇಹಿ, ಜನಸ್ನೇಹಿ ಕಾರ್ಯಕ್ರಮದಲ್ಲಿ ಸಲ್ಲಿಸಲಾದ ಬಸವನಗುಡಿ ಪ್ರಸ್ತಾವನೆ ಯಾವುದೇ ಕ್ರಮಗಳಿಲ್ಲದೆ ನೆನೆಗುದಿಗೆ ಬಿದ್ದಿದೆ.

ಈ ಬಗ್ಗೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಸ್ಕರ್ ಅಲಿ ಮಾತನಾಡುತ್ತಾ, ಗ್ರಾಮ ಪಂಚಾಯತ್‌ಗಳಿಗೆ ಈಗ ಸಾಕಷ್ಟು ಅನುದಾನದ ಕೊರತೆಯಿದೆ . ಎಲ್ಲಾ ಕೆಲಸಗಳು ಪಂಚಾಯತ್‌ನಿಂದ ಆಗಬೇಕೆಂದು ನಿರೀಕ್ಷಿಸಲಾಗುತ್ತದೆ. ಜನಸ್ನೆಹಿ ಕಾರ್ಯಕ್ರಮ ಈಗ ಸ್ಥಗಿತಗೊಂಡಿದ್ದರೂ ಆ ಸಂದರ್ಭದಲ್ಲಿ ಸ್ವೀಕರಿಸಲಾದ ಮನವಿಗಳನ್ನು ಜಿಲ್ಲಾ ಪಂಚಾಯತ್‌ಗಳಲ್ಲಿ ದಾಖಲಿಸಲಾಗಿದೆ. ಅಪೂರ್ಣಗೊಂಡ ಹಾಗೂ ಕೈಗೆತ್ತಿಕೊಳ್ಳದೆ ಇರುವ ಕಾಮಗಾರಿಗಳನ್ನು ಮುಂದಿನ ಹಂತದಲ್ಲಿ ಶಾಸಕರ, ಸಂಸದರ ನಿಧಿ ಅಥವಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳ ಮೂಲಕ ನೀಡಲಾಗುವ ಅನುದಾನದಿಂದ ಪೂರೈಸಬೇಕಾಗಿದೆ ಎಂದು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News