×
Ad

‘ರೈಲು ರೋಕೋ’ ನಡೆಸಿದವರಿಗೆ ದಂಡ ವಿಧಿಸಿದ ನ್ಯಾಯಾಲಯ

Update: 2016-06-15 20:14 IST

ಉಡುಪಿ, ಜೂ.15: ಕೊಂಕಣ ರೈಲ್ವೆ ಅಧಿಕಾರಿಗಳಿಗೆ ಯಾವುದೇ ಪೂರ್ವಸೂಚನೆ ನೀಡದೇ ಬೈಂದೂರಿನ ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ಕಳೆದ ಫೆ.12ರಂದು ರೈಲು ರೋಕೊ ನಡೆಸಿ ಮಂಗಳೂರು-ಮಡಗಾಂವ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಸುಮಾರು ಅರ್ಧಗಂಟೆ ತಡೆದು ನಿಲ್ಲಿಸಿದ ಪ್ರತಿಭಟನಕಾರರಿಗೆ ಕುಂದಾಪುರ ನ್ಯಾಯಾಲಯ ಭಾರೀ ದಂಡ, ತಪ್ಪಿದರೆ 40 ದಿನಗಳ ಸರಳ ಜೈಲುವಾಸದ ಶಿಕ್ಷೆ ವಿಧಿಸಿದೆ ಎಂದು ಕೊಂಕಣ ರೈಲ್ವೆ ಕಾರ್ಪೋರೇಷನ್‌ನ ಜಿಎಂ (ಆಡಳಿತ) ಸಿದ್ದೇಶ್ವರ ತೆಲುಗು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಂದೂರಿನ ಬೈಂದೂರು ಮೇಲ್ಸೆತುವೆ ಹೋರಾಟ ಸಮಿತಿ ಎಂಬ ಹೆಸರಿನ ಸಂಘಟನೆಯೊಂದರ ಸದಸ್ಯರು ಫೆ.12ರಂದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರೈಲು ರೋಕೊ ನಡೆಸಿದ್ದು, ಇದಕ್ಕೆ ಪೂರ್ವಾನುಮತಿ ಪಡೆದಿರಲಿಲ್ಲ. ಬೈಂದೂರು ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ಮಂಗಳೂರು-ಮಡಂಗಾವ್ ರೈಲನ್ನು ಹಠಾತ್ತನೆ ತಡೆದು ನಿಲ್ಲಿಸಿದ್ದಲ್ಲದೇ, ರೈಲ್ವೆ ಸಿಬ್ಬಂದಿಗಳಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಹ ಅಡಚಣೆ ಉಂಟು ಮಾಡಿದ್ದರು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಳವಳಿಗಾರರು ಸುಮಾರು 23 ನಿಮಿಷ ರೈಲು ತಡೆದುದರಿಂದ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದಲ್ಲದೇ, ರೈಲು ನಿಗದಿತ ವೇಳೆಯಲ್ಲಿ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಟ್ಕಳದ ಆರ್‌ಪಿಎಫ್ ಅವರು ಬೈಂದೂರು ಮೇಲ್ಸುತುವೆ ಹೋರಾಟ ಸಮಿತಿ ಸದಸ್ಯರ ವಿರುದ್ಧ, ರೈಲ್ವೆ ಕಾನೂನಿನಡಿ ರೈಲ್ವೆ ಆವರಣಕ್ಕೆ ಅಕ್ರಮ ಪ್ರವೇಶ ಮಾಡಿದ ಹಾಗೂ ಮಧ್ಯದಲ್ಲೇ ರೈಲನ್ನು ತಡೆದು ನಿಲ್ಲಿಸಿದ ಬಗ್ಗೆ ಮೊಕದ್ದಮೆ ದಾಖಲಿಸಿದ್ದರು.

ಈ ಮೊಕದ್ದಮೆಯ ವಿಚಾರಣೆ ನಡೆಸಿದ ಕುಂದಾಪುರದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅವರು ಕಳೆದ ಶುಕ್ರವಾರ ನೀಡಿದ ತೀರ್ಪಿನಲ್ಲಿ, ರೈಲ್ವೆ ರೋಕೊನಲ್ಲಿ ಭಾಗವಹಿಸಿದ್ದ ಆರೋಪಿಗಳಾದ ಸಮಿತಿಯ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹಾಗೂ ಇತರ 11 ಮಂದಿ (ಶಂಕರ ದೇವಾಡಿಗ, ವಿಠಲ ದೇವಾಡಿಗ, ಎಂ.ಪಿ.ಸಣ್ಣಯ್ಯ, ಸುರೇಂದ್ರ ಶೇಟ್, ಭಾಸ್ಕರ ಶೆಟ್ಟಿ, ರವೀಂದ್ರ ಶೇಟ್, ಶಂಕರ ಮಂಜಪ್ಪ ದೇವಾಡಿಗ, ಸುಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಶೇರುಗಾರ್, ನಾಗರಾಜ್ ಎಸ್. ಹಾಗೂ ಅಬ್ದುಲ್ ಸಮದ್) ತಪ್ಪಿತಸ್ಥರೆಂದು ಘೋಷಿಸಿ 48,000ರೂ.ಗಳ ದಂಡ ವಿಧಿಸಿ ಬಿಡುಗಡೆ ಮಾಡುವಂತೆ, ದಂಡ ಕಟ್ಟಲು ವಿಫಲರಾದರೆ 40 ದಿನಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯದ ಈ ಮಹತ್ವದ ತೀರ್ಪಿನಿಂದ ರೈಲ್ವೆಯ ಸುಗಮ ಸಂಚಾರಕ್ಕೆ ಅಡೆತಡೆ ಉಂಟುಮಾಡುವ ಕಿಡಿಗೇಡಿಗಳಿಗೆ ಹಾಗೂ ರೈಲ್ವೆ ಪ್ರಯಾಣಿಕರಿಗೆ ತೊಂದರೆ ನೀಡುವವರಿಗೆ ಎಚ್ಚರಿಕೆ ನೀಡಿದಂತಾಗಿದೆ ಎಂದು ಸಿದ್ದೇಶ್ವರ ತೆಲುಗು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News