ರಾಜಿಗೆಂದು ಕರೆದು ಮಾರಣಾಂತಿಕ ಹಲ್ಲೆ: ಬಜರಂಗದಳದ ಅಧ್ಯಕ್ಷನ ವಿರುದ್ಧ ದೂರು
ಪಡುಬಿದ್ರೆ, ಜೂ.15: ಸ್ನೇಹಿತರಲ್ಲಿ ಉಂಟಾದ ಅಸಮಾಧಾನಕ್ಕೆ ಸಂಬಂಧಪಟ್ಟು ರಾಜಿಗೆಂದು ಕರೆದು ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಎರ್ಮಾಳು ನಿವಾಸಿ ನಿತೇಶ್ ಸುವರ್ಣ, ಸಂತೋಷ್, ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಗಾಯಾಳುಗಳು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 10:30ಕ್ಕೆ ಅನುಪಮಾ ಬಾರ್ ಬಳಿ ಈ ಘಟನೆ ನಡೆದಿದೆ. ರಾಜೇಶ್ ಕೋಟ್ಯಾನ್ ಮತ್ತು ನಿತೇಶ್ ಸುವರ್ಣರು ಸ್ನೇಹಿತರಾಗಿದ್ದರು.
ಘಟನೆಯೊಂದಕ್ಕೆ ಸಂಬಂಧಿಸಿ ಈ ತಂಡದೊಳಗೆ ವೈಮನಸ್ಸು ಉಂಟಾಗಿತ್ತು. ನಿನ್ನೆ ರಾತ್ರಿ ರಾಜಿಗೆಂದು ಕರೆಯಲಾಗಿತ್ತು. ಆದರೆ ರಾಜೇಶ್ ಕೋಟ್ಯಾನ್ ಮತ್ತು ಸುಮಾರು ಎಂಟು ಮಂದಿಯ ತಂಡ ಎರಡು ಕಾರಿನಲ್ಲಿ ಬಂದು ನಿತೇಶ್ ಸುವರ್ಣರಿಗೆ ಚೂರಿ, ಮಚ್ಚು ಮತ್ತು ಮರದ ಸೋಂಟೆಯಿಂದ ಹಲ್ಲೆ ನಡೆಸಿದೆ. ಈ ವೇಳೆ ಇದನ್ನು ತಡೆಯಲು ಬಂದ ಸಂತೋಷ್, ಚಂದ್ರಶೇಖರ್‌ರಿಗೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.