ಕೆಲಸದಿಂದ ತೆಗೆದಿದ್ದಕ್ಕೆ ಬಸ್ಸಿಗೆ 'ಸಿಹಿ ತಿನ್ನಿಸಿ' ಪೊಲೀಸರ ಅತಿಥಿಯಾದ ಕಂಡಕ್ಟರ್
ಮುಲ್ಕಿ,ಜೂ.15: ಕೆಲಸದಿಂದ ವಜಾ ಮಾಡಿದ ಸಿಟ್ಟಿನಲ್ಲಿ ಬಸ್ ನಿರ್ವಾಹಕನೋರ್ವ ಬಸ್ಸಿನ ಇಂಜಿನಿಗೆ ಸಕ್ಕರೆ ಹಾಕಿ ಬಸ್ಸು ಮಾಲಕರಿಗೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿ ‘ಸಿಹಿಯಾಗಿ’ ತನ್ನ ಸೇಡು ತೀರಿಸಿಕೊಂಡಿದ್ದಾನೆ.
ಮುಲ್ಕಿ-ಕಾರ್ಕಳ ಮಧ್ಯೆ ಸಂಚರಿಸುವ ‘ಸಾಲ್ಯಾನ್ ಟ್ರಾವೆಲ್ಸ್’ ಎಂಬ ಹೆಸರಿನ ಬಸ್ಸಿನ ನಿರ್ವಾಹಕ ಸತೀಶ್ ಕರ್ಕೇರ(32) ಎಂಬಾತನೇ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಸಕ್ಕರೆ ಸುರಿದು ಸೇಡು ತೀರಿಸಿಕೊಂಡ ನಿರ್ವಾಹಕ. ಘಟನೆಗೆ ಸಂಬಂಧಪಟ್ಟಂತೆ ಬಸ್ ಮಾಲಕರು ನಿರ್ವಾಹಕನ ವಿರುದ್ದ ದೂರು ನೀಡಿದ್ದು ಮುಲ್ಕಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸತೀಶ್ ಕಳೆದ ಕೆಲ ದಿನಗಳಿಂದ ಬಸ್ಸಿನ ಆಯಾ ದಿನದ ಕಲೆಕ್ಷನನ್ನು ಸರಿಯಾಗಿ ನೀಡದೆ ಸತಾಯಿಸುತ್ತಿದ್ದ ಎಂಬ ಆರೋಪದ ಮೇಲೆ ಬಸ್ ಮಾಲಕ ಜನಾರ್ದನ ಪೂಜಾರಿ ಈತನನ್ನು ಕೆಲಸದಿಂದ ವಜಾ ಮಾಡಿದ್ದರು. ಇದರಿಂದ ಕುಪಿತಗೊಂಡ ನಿರ್ವಾಹಕ ಸತೀಶ್ ಬಸ್ ಮುಲ್ಕಿ ಸಮೀಪದ ಕ್ಷೀರಸಾಗರ ಪೆಟ್ರೋಲ್ ಬಂಕಿನಲ್ಲಿ ನಿಲ್ಲಿಸಿದ್ದ ವೇಳೆ ರಾತ್ರಿ ಹೊತ್ತು ಡೀಸೆಲ್ ಟ್ಯಾಂಕ್‌ಗೆ ಸಕ್ಕರೆ ಸುರಿದು ಸೇಡು ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.
ಮರುದಿನ ಬಸ್ ಟ್ರಿಪ್ ಹೊಡೆಯುತ್ತಿದ್ದ ವೇಳೆ ಸಕ್ಕರೆ ಹಾಕಿದ್ದರಿಂದ ಇಂಜಿನ್ ಸಂಪೂರ್ಣ ಸ್ಥಬ್ದಗೊಂಡಿತ್ತು. ಮೆಕ್ಯಾನಿಕ್‌ಗಳು ಬಂದು ಪರಿಶೀಲನೆ ನಡೆಸಿದ ವೇಳೆ ಇಂಜಿನ್‌ನಲ್ಲಿ ಸಕ್ಕರೆ ಪತ್ತೆಯಾಗಿತ್ತು. ಈ ಬಗ್ಗೆ ಮಾಲಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಶ್ನಿಸಿದಾಗ ಸತೀಶ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ನಿಜಾಂಶವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.
ಇದರಿಂದ ಬಸ್ಸು ಮಾಲಕರಿಗೆ ಸುಮಾರು 1.5 ಲಕ್ಷ ರೂ. ನಷ್ಟವಾಗಿದೆ ಎಂದು ದೂರಲಾಗಿದೆ. ಮುಲ್ಕಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.